ಬೆಳ್ಳಾಯರು ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಕಳ್ಳತನ ಯತ್ನ: ಕೊಡಗಿನ ಖತರ್ನಾಕ್ ಕಳ್ಳ ಮುಲ್ಕಿ ಪೊಲೀಸರ ವಶಕ್ಕೆ!

ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕನ್ನವಿಟ್ಟು ಕಾಣಿಕೆ ಹುಂಡಿ ದೋಚಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಮುಲ್ಕಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ನಿವಾಸಿ, ರವಿಕುಮಾರ ಅಲಿಯಾಸ್ ರವಿ ಹೆಚ್.ಜಿ. (೨೦) ಎಂದು ಗುರುತಿಸಲಾಗಿದೆ.

ಸಿನಿಮೀಯ ಮಾದರಿಯಲ್ಲಿ ಕಳ್ಳತನ:
ದಿನಾಂಕ 18-08-2026ರ ಮಧ್ಯರಾತ್ರಿ ದೇವಸ್ಥಾನದ ಮಾಡಿನ ಮೇಲಿದ್ದ ಜಾಲರಿಯನ್ನು ಕಟ್ ಮಾಡಿ ಒಳನುಗ್ಗಿದ್ದ ಈತ, ಯಾರ ಕಣ್ಣಿಗೂ ಬೀಳದಿರಲು ಮೊದಲು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಬೇರೆಡೆಗೆ ತಿರುಗಿಸಿದ್ದಾನೆ. ಬಳಿಕ ಕಾಣಿಕೆ ಡಬ್ಬಿಯ ಬೀಗ ಮುರಿದು ನಗದನ್ನು ದೋಚಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಅವರ ಸಿಬ್ಬಂದಿಗಳ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಬಂಧಿತನಿಂದ ಕಳುವಾಗಿದ್ದ ₹2,195 ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹಲವು ಠಾಣೆಗಳಲ್ಲಿ ಕಳವು ಪ್ರಕರಣ:
ಬಂಧಿತ ೨೦ ವರ್ಷದ ರವಿಕುಮಾರ ಸಣ್ಣ ವಯಸ್ಸಿನಲ್ಲೇ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಳೆ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯೊಂದರಲ್ಲೇ ಸಾಲು ಸಾಲು ಕಳವು ಹಾಗೂ ಅಕ್ರಮ ಚಟುವಟಿಕೆಗಳ ಸಂಬಂಧ ೫ ಪ್ರತ್ಯೇಕ (ಅ.ಕ್ರ: 44/2024, 148/2024, 365/2024, 386/2024, 354/2024) ಗಂಭೀರ ಪ್ರಕರಣಗಳು ದಾಖಲಾಗಿವೆ.

Advt

ಮುಲ್ಕಿ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!