ನ.6-7ರಂದು ನಿಟ್ಟೆ ವಿಶ್ವವಿದ್ಯಾಲಯ:ದ 16ನೇ ವಾರ್ಷಿಕ ಘಟಿಕೋತ್ಸವ: 3,325 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮಂಗಳೂರು: 2026ರ ನವೆಂಬರ್ 6 ಮತ್ತು 7ರಂದು ಮಂಗಳೂರು ಹಾಗೂ ನಿಟ್ಟೆಯಲ್ಲಿ ಮೂರು ಹಂತಗಳಲ್ಲಿ ಸಮಾರಂಭ: 57 ಚಿನ್ನದ ಪದಕ ಹಾಗೂ 159 ಪ್ರಶಂಸನಾ ಪತ್ರಗಳ ವಿತರಣೆ ಸಮಾರಂಭ ನಡೆಯಲಿದೆ ಎಂದು ನಿಟ್ಟೆ ಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯವು ತನ್ನ 16ನೇ ವಾರ್ಷಿಕ ಘಟಿಕೋತ್ಸವವನ್ನು ನವೆಂಬರ್ 6 ಮತ್ತು 7 ರಂದು ಮಂಗಳೂರು ಹಾಗೂ ನಿಟ್ಟೆ ಕ್ಯಾಂಪಸ್‌ಗಳಲ್ಲಿ ಮೂರು ಹಂತಗಳಲ್ಲಿ ಆಯೋಜಿಸಲಿದೆ. ವಿವಿಧ ವಿಭಾಗಗಳ ಒಟ್ಟು 3,325 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.
ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸಿ ವಿಶ್ವವಿದ್ಯಾಲಯವು 57 ಚಿನ್ನದ ಪದಕ ಹಾಗೂ 159 ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಿದೆ ಎಂದರು.

ಘಟಿಕೋತ್ಸವದ ವೇಳಾಪಟ್ಟಿ ಮತ್ತು ಮುಖ್ಯ ಅತಿಥಿಗಳು:
ಮೊದಲ ಹಂತ: ನವೆಂಬರ್ 6, 2026 | ಬೆಳಿಗ್ಗೆ 10:00 | ಮಂಗಳೂರು ಕ್ಯಾಂಪಸ್, ಮಂಗಳೂರು
ಮೊದಲ ಸಮಾರಂಭವು ಮಂಗಳೂರಿನ ದೇರಳಕಟ್ಟೆಯ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (PGIMER) ನಿರ್ದೇಶಕ ಪ್ರೊ. ಡಾ. ವಿವೇಕ್ ಲಾಲ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಎರಡನೇ ಹಂತ: ನವೆಂಬರ್ 7, 2026 | ಬೆಳಿಗ್ಗೆ 10:00 | ನಿಟ್ಟೆ ಆಫ್-ಕ್ಯಾಂಪಸ್ ಸೆಂಟರ್, ನಿಟ್ಟೆ
ಎರಡನೇ ಸಮಾರಂಭವು ಎನ್‌ಎಂಎಎಮ್ ತಾಂತ್ರಿಕ ಸಂಸ್ಥೆಯ (NMAMIT) ಪದವಿ ವಿದ್ಯಾರ್ಥಿಗಳಿಗಾಗಿ ನಿಟ್ಟೆಯ ಆಫ್-ಕ್ಯಾಂಪಸ್ ಕೇಂದ್ರದಲ್ಲಿ ನಡೆಯಲಿದೆ. ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯ ಸಹ-ಕುಲಾಧಿಪತಿ ಹಾಗೂ ಪುಣೆಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್‌ ಟೆಕ್ನಾಲಜಿಯ (DIAT) ಮಾಜಿ ಕುಲಪತಿ ಡಾ. ಪ್ರಹ್ಲಾದ ರಾಮರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಮೂರನೇ ಹಂತ: ನವೆಂಬರ್ 7, 2026 | ಸಂಜೆ 4:00 | ನಿಟ್ಟೆ ಆಫ್-ಕ್ಯಾಂಪಸ್ ಸೆಂಟರ್, ನಿಟ್ಟೆ
ಮೂರನೇ ಸಮಾರಂಭವು ಪಿಎಚ್‌ ಡಿ ಸಂಶೋಧಕರು, ಎನ್‌ಎಂಎಎಮ್‌ಐಟಿ ಮತ್ತು ಜೆಕೆಎಸ್‌ಎಚ್‌ಐಎಂನ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಡಾ. ಎನ್. ಎಸ್. ಎ. ಎಮ್. ಪ್ರಥಮ ದರ್ಜೆ ಕಾಲೇಜು ಮತ್ತು ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್‌ನ ಪದವಿ ವಿದ್ಯಾರ್ಥಿಗಳಿಗೆ ನಡೆಯಲಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಅಧ್ಯಕ್ಷ ಹಾಗೂ ಪ್ರಸಾರ ಭಾರತಿಯ ಮಾಜಿ ಸಿಇಒ ಶ್ರೀ ಶಶಿ ಶೇಖರ್ ವೆಂಪತಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಈ ಮೂರೂ ಸಮಾರಂಭಗಳ ಅಧ್ಯಕ್ಷತೆಯನ್ನು ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಕುಲಾಧಿಪತಿ ಶ್ರೀ ವಿಶಾಲ್ ಹೆಗ್ಡೆ ವಹಿಸಲಿದ್ದಾರೆ. ಸಹ- ಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಮತ್ತು ಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ ಉಪಸ್ಥಿತರಿರುವರು. ಕುಲಪತಿಯವರು ಸ್ವಾಗತ ಭಾಷಣ ಮಾಡಲಿದ್ದಾರೆ. ಕುಲಸಚಿವರು ಸೇರಿದಂತ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಪರೀಕ್ಷಾ ನಿಯಂತ್ರಕರು, ಕಾರ್ಯಕಾರಿ ಮಂಡಳಿ ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯರು, ಹಾಗೂ ಕಾಲೇಜುಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವೈದ್ಯಕೀಯ, ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸಸ್, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಬಯೋಲಾಜಿಕಲ್ ಸೈನ್ಸಸ್, ವಾಸ್ತುಶಿಲ್ಪ, ವಾಕ್ ಮತ್ತು ಶ್ರವಣ, ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್‌ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಒಟ್ಟು 3,325 ವಿದ್ಯಾರ್ಥಿಗಳಲ್ಲಿ 1455 ವಿದ್ಯಾರ್ಥಿಗಳು ಮಂಗಳೂರು ಕ್ಯಾಂಪಸ್‌ಗೆ ಹಾಗೂ 1870 ವಿದ್ಯಾರ್ಥಿಗಳು ನಿಟ್ಟೆ ಕ್ಯಾಂಪಸ್‌ಗೆ ಸೇರಿದವರಾಗಿದ್ದಾರೆ.
ಪದವಿ ಪಡೆಯುವವರಲ್ಲಿ 1,148 ಬಿ.ಟೆಕ್, 347 ವೈದ್ಯಕೀಯ, 220 ಫಾರ್ಮಸಿ, 181 ಎಂಸಿಎ, 180 ಎಂಬಿಎ ಮತ್ತು 140 ಬಯೋಲಾಜಿಕಲ್ ಸೈನ್ಸಸ್ ವಿದ್ಯಾರ್ಥಿಗಳು ಹಾಗೂ ಇತರ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಸೇರಿದ್ದಾರೆ. ವಿಶ್ವವಿದ್ಯಾಲಯವು 39 ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಚಿನ್ನದ ಪದಕಗಳು ಮತ್ತು 18 ದತ್ತಿ ಚಿನ್ನದ ಪದಕಗಳು ಸೇರಿದಂತೆ ಒಟ್ಟು 57 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದೆ. ಜೊತೆಗೆ, ಉತ್ತಮ ಶೈಕ್ಷಣಿಕ ಸಾಧನೆಗಾಗಿ ವಿದ್ಯಾರ್ಥಿಗಳಿಗೆ 159 ಪ್ರಶಂಸನಾ ಪತ್ರಗಳನ್ನು ನೀಡಲಾಗುವುದು.
ಈ 16ನೇ ವಾರ್ಷಿಕ ಘಟಿಕೋತ್ಸವವು ಪದವಿ ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮಿಸುತ್ತದೆ. ಇದು ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ, ವೃತ್ತಿಪರ ಅಭಿವೃದ್ಧಿ ಮತ್ತು ಸಮಾಜ ಸೇವೆಯೆಡೆಗೆ ವಿಶ್ವವಿದ್ಯಾಲಯದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ನಿಟ್ಟೆ ವಿಶ್ವವಿದ್ಯಾಲಯ ಕುರಿತು:
ನಿಟ್ಟೆ ಎಜುಕೇಶನ್‌ ಟ್ರಸ್ಟ್‌ನ ಭಾಗವಾಗಿ 2008ರಲ್ಲಿ ಸ್ಥಾಪನೆಗೊಂಡ ನಿಟ್ಟೆ ವಿಶ್ವವಿದ್ಯಾಲಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (NAAC) ‘A+’ ಗ್ರೇಡ್ ಮಾನ್ಯತೆ ಪಡೆದಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) ಭಾರತದ ವಿಶ್ವವಿದ್ಯಾಲಯಗಳ ಪೈಕಿ 80ನೇ ಶ್ರೇಯಾಂಕ ಪಡೆದಿದೆ. ಅಲ್ಲದೆ, ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರ್‌ಯಾಂಕಿಂಗ್ಸ್‌ನಲ್ಲಿ ಜಾಗತಿಕವಾಗಿ ಟಾಪ್ 300 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್‌ಯಾಂಕಿಂಗ್ಸ್‌ನಲ್ಲಿ 1001 – 1200 ಶ್ರೇಯಾಂಕದ ಸಾಲಿನಲ್ಲಿ ಸ್ಥಾನ ಪಡೆದಿಡೆ.
ವಿಶ್ವವಿದ್ಯಾಲಯವು ಆರೋಗ್ಯ ವಿಜ್ಞಾನ, ಜೈವಿಕ ವಿಜ್ಞಾನ, ಸಂವಹನ ಅಧ್ಯಯನ, ವಾಸ್ತುಶಿಲ್ಪ, ಎಂಜಿನಿಯರಿಂಗ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌, ಹಾಸ್ಪಿಟಾಲಿಟಿ, ಕಾಮರ್ಸ್‌ ಮತ್ತು ಮ್ಯಾನೇಜ್‌ಮೆಂಟ್ ಸೇರಿದಂತೆ 151ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಇದರ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕೋರ್ಸ್‌ಗಳು ಸೇರಿದ್ದು, ಭಾರತ ಹಾಗೂ ವಿದೇಶಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.
ವಿಶ್ವವಿದ್ಯಾಲಯದ ಸಾಮಾಜಿಕ ಸೇವೆಯ ಪ್ರಮುಖ ಭಾಗವಾಗಿ ನಾಲ್ಕು ಜಿಲ್ಲೆಗಳಲ್ಲಿ 21 ಗ್ರಾಮೀಣ ಆರೋಗ್ಯ ಕೇಂದ್ರಗಳು ಮತ್ತು ಎರಡು ಗ್ರಾಮೀಣ ಆಸ್ಪತ್ರೆಗಳ ಜಾಲ ಕಾರ್ಯನಿರ್ವಹಿಸುತ್ತಿದೆ. ಈ ಸೌಲಭ್ಯಗಳು ವಾರ್ಷಿಕವಾಗಿ ಎರಡು ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಸಮುದಾಯ ಆಧಾರಿತ ಕಲಿಕೆ ಮತ್ತು ಪ್ರಾಯೋಗಿಕ ತರಬೇತಿಗೆ ಬೆಂಬಲ ನೀಡುತ್ತವೆ.
ಪತ್ರಿಕಾಗೋಷ್ಟಿಯಲ್ಲಿ ರಿಜಿಸ್ಟರ್ ಹರ್ಷ ಹಾಲಹಳ್ಳಿ, ಸಿಇಓ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advt
error: Content is protected !!