
ಉಡುಪಿ: ಬಾಲಕನನ್ನು ಬ್ರಹ್ಮಾವರ ಬಸ್ ನಿಲ್ದಾಣದಿಂದ ಅಪಹರಿಸಿ ಕೇರಳಕ್ಕೆ ಕರೆದೊಯ್ದು ಅಲ್ಲಿ ಬಲವಂತವಾಗಿ ಕೆಲಸಕ್ಕೆ ಸೇರಿಸಿ ದೌರ್ಜನ್ಯ ಎಸಗಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಾರಂಬಳ್ಳಿ ಗ್ರಾಮದ ಸಾಲಿಕೇರಿಯ ವಿಖ್ಯಾತ್ ಆಚಾರ್ಯ(19) ಹಾಗೂ ಮಟಪಾಡಿ ಗ್ರಾಮದ ನಿವಾಸಿ ಸುಚಿತ್ ನಾಯಕ್(20) ಬಂಧಿತರು.
ಘಟನೆಯ ವಿವರ:
ಆರೋಪಿಗಳು ಜೂನ್ 1ರಂದು ಬೆಳಗ್ಗೆ ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಿಂದ ಅಪ್ರಾಪ್ತ ಬಾಲಕನನ್ನು ಅಪಹರಿಸಿಕೊಂಡು ಕೇರಳದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿಗೆ ಕರೆದೊಯ್ದಿದ್ದರು.ಅಲ್ಲಿ ಬಲವಂತವಾಗಿ ಪ್ಲೈವುಡ್ ಕಂಪೆನಿಗೆ ಕೆಲಸಕ್ಕೆ ಸೇರಿಸಿದ್ದರು.

ಬಾಲಕ ಕೆಲಸ ಮಾಡುವುದಿಲ್ಲ ವಾಪಾಸ್ ಮನೆಗೆ ಬಿಡುವಂತೆ ಹಠ ಹಿಡಿದಾಗ, ಜೂ.9ರಂದು ಸುಚಿತ್ ರೂಮಿನಲ್ಲಿ ಬಾಲಕನಿಗೆ ಹಲ್ಲೆ ನಡೆಸಿದ್ದು, ವಿಖ್ಯಾತ್ ಕೊಲೆ ಬೆದರಿಕೆ ಹಾಕಿದ್ದ. ಇದನ್ನು ಆರೋಪಿಗಳು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
