
ಮಂಗಳೂರು: ದಕ್ಷಿಣ ಕನ್ನಡ ವೆಲ್ಡಿಂಗ್ ಫ್ಯಾಬ್ರಿಕೇಷನ್ ಓನರ್ಸ್ ಅಸೋಸಿಯೇಶನ್‌ನ ಯೂನಿಯನ್ ಸಭೆ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಿತು. ಸುಮಾರು 350ಕ್ಕೂ ಅಧಿಕ ಸದಸ್ಯರುಗಳು ಈ ಅಸೋಸಿಯೇಶನ್‌ನಲ್ಲಿದ್ದು, ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಕೋಶಾಧಿಕಾರಿ ಗುಜ್ಜಾರ್ ಅಹಮದ್ ಇಸ್ಮಾಯಿಲ್ ವಾರ್ಷಿಕ ವರದಿ ಜತೆಗೆ ಲೆಕ್ಕಪತ್ರ ಮಂಡಿಸಿದರು. ನಮ್ಮ ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಅನಾರೋಗ್ಯ ಮತ್ತು ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವ ಸಂಘದ ಸದಸ್ಯರಿಗೆ ಪರಿಹಾರವನ್ನು ವಿತರಿಸುವ ಯೋಜನೆ ಇದೆ ಎಂದರು.

ಅಸೋಸಿಯೇಶನ್ ಅಧ್ಯಕ್ಷ ಸಂದೇಶ್ ಎಂ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮೆಲ್ಲರ ಒಗ್ಗಟ್ಟಿನ ಶಕ್ತಿಯನ್ನು ನೋಡಿ ನಿಜವಾಗಿಯೂ ಸಂತೋಷವಾಗುತ್ತಿದೆ. ವೆಲ್ಡಿಂಗ್ ಫ್ಯಾಬ್ರಿಕೇಷನ್ ಉದ್ಯಮದ ಬೆನ್ನೆಲುಬಾಗಿರುವ ನಾವೆಲ್ಲರೂ ಇಲ್ಲಿ ಒಟ್ಟು ಸೇರಿದ್ದೇವೆ. ಒಗ್ಗಟ್ಟಿಲ್ಲದೆ ಶ್ರಮವಿಲ್ಲ. ನಮ್ಮ ಶ್ರಮವಿಲ್ಲದೆ ಅಭಿವೃದ್ಧಿಯಿಲ್ಲ. ನಮ್ಮ ಕೆಲಸದಲ್ಲಿ ಮೊದಲ ಆದ್ಯತೆ ಸುರಕ್ಷತೆ. ಒಂದು ಸಣ್ಣ ನಿರ್ಲಕ್ಷ್ಯ ನಮ್ಮ ಜೀವನವನ್ನೇ ಬದಲಾಯಿಸಬಹುದು ಎಂದರು.
ಸಂಘಕ್ಕೆ ನೀವು ಬಲ ತುಂಬಿದರೆ, ಸಂಘ ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತದೆ. ಸುರಕ್ಷಿತ ಕೆಲಸಗಾರನೇ ನೆಮ್ಮದಿಯ ಮಾಲೀಕ ಎಂದರಲ್ಲದೆ, ಸಂಘದ ವತಿಯಿಂದ ಸುರಕ್ಷತಾ ನವೀಕರಣಗಳು, ಕೆಲಸದ ವಿಚಾರ, ವೇತನ ಮತ್ತು ದರ ಕುರಿತು ಚರ್ಚೆ, ಸದಸ್ಯರಿಗೆ ಸಂಘದ ವತಿಯಿಂದ ನೀಡಲಾಗುವ ಪ್ರಯೋಜನಗಳು, ಯೂನಿಯನ್ ಕಾರ್ಡ್ ಮತ್ತಿತರ ವಿಚಾರದ ಕುರಿತಾಗಿ ಸದಸ್ಯರಿಗೆ ತಿಳಿಸಿದರು.

ಉಪಾಧ್ಯಕ್ಷ ಪಿ.ಮೋಹಿಸಿನ್, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸಿ.ಎಚ್., ಜತೆ ಕಾರ್ಯದರ್ಶಿ ಮನೀಶ್ ಸಿ. ಸುವರ್ಣ, ಜೊತೆ ಕಾರ್ಯದರ್ಶಿ ದಾವೂದ್, ಮುಸ್ತಫಾ, ಅಬ್ದುಲ್ ರಹಮಾನ್, ಲತೀಫ್ ಅಲ್ಬ, ಮನೋಜ್ ತಲಪಾಡಿ, ಕಮಲ್ ತೊಕ್ಕೊಟ್ಟು, ಅಜ್ಮಲ್ ಉಳ್ಳಾಲ್, ನೊರ್ಮಾನ್ ಅಂಚನ್, ಅಲ್ತಾಫ್ ಚೆಂಬುಗುಡ್ಡೆ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ನಾಮದೇವ್ ಕಾರ್ಯಕ್ರಮ ನಿರೂಪಿಸಿದರು.
