
ಮಂಗಳೂರು: ರಂಗಭೂಮಿ ಕಲೆಯಿಂದ ಸಂಗೀತ, ಭಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹದೊಂದಿಗೆ ಕಲಾವಿದರಿಗೆ ವಿಫುಲ ಅವಕಾಶ ಲಭಿಸುತ್ತದೆ. ದೇಶದ ಸಂಸ್ಕೃತಿ ಮತ್ತು ಮೌಲ್ಯವರ್ಧನೆಗೆ ನಾಟಕ ಮಾಧ್ಯಮವು ಸಹಕಾರಿಯಾಗಿದೆ. ಕೃಷ್ಣಾಪುರ ರಂಗಪರ್ಬ 2026 ಕಾರ್ಯಕ್ರಮವು ಸಮಾಜದಲ್ಲಿ ಸತ್ ಪರಿವರ್ತನೆಗೆ ದಾರಿ ಮಾಡಿಕೊಡಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.
ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ 06 ರಿಂದ 12 ರ ವರೆಗೆ ಕೃಷ್ಣಾಪುರದಲ್ಲಿ ನಡೆಯಲಿರುವ ಅಂತರ್ ರಾಜ್ಯ ಮಟ್ಟದ ತುಳು ನಾಟಕ ಸ್ಪರ್ಧಾ ಸಪ್ತಾಹದ ಲಾಂಛನವನ್ನು ಒಡಿಯೂರು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿ ಆಶೀರ್ವಚನವಿತ್ತರು.
ಸಮಿತಿಯ ಕಾರ್ಯ ಚಟುವಟಿಕೆಗಳ ಮೂಲಕ ಅಂತರಂಗ ಮತ್ತು ಬಹಿರಂಗವೆಂಬ ಎರಡೂ ಮುಖಗಳು ದೇವರಿಗೆ ಸಮರ್ಪಣೆಗೊಳ್ಳಲಿ ಎಂದು ಹಾರೈಸಿದರು.

ಸಮಿತಿಯ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಕಾರ್ಯ ಯೋಜನೆಯನ್ನು ವಿವರಿಸಿದರು. ಪದಾಧಿಕಾರಿಗಳಾದ ಅಶೋಕ್ ಕೃಷ್ಣಾಪುರ, ಪಿ. ಸುಧಾಕರ ಕಾಮತ್, ಪಿ. ಉಪೇಂದ್ರ ಆಚಾರ್ಯ, ವಿಠ್ಠಲ ಶೆಟ್ಟಿ, ಲಕ್ಷ್ಮೀ ಶೇಖರ್ ದೇವಾಡಿಗ, ಸುಧಾ ಆಚಾರ್ಯ, ರಾಕೇಶ್ ಕೋಟ್ಯಾನ್, ಸತೀಶ್ ಸಾಲ್ಯಾನ್, ವಿಶ್ವನಾಥ ಬಿ. ಮೂಲ್ಯ, ಸೌಮ್ಯ ಸುಧೀರ್, ರೋಷನ್ ಶೆಟ್ಟಿ, ಕಮಲಾ ನಾಯಕ್, ರೇಣುಕಾ ತಿಲಕ್ ರಾಜ್, ಗಿರೀಶ್ ಕುಲಾಲ್, ಶರತ್ ಬೊಳ್ಳಾಜೆ, ವಿಶ್ವನಾಥ ಆಚಾರ್ಯ, ಗಣೇಶ ಶೆಟ್ಟಿಗಾರ್, ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು.
