
ಮಂಜೇಶ್ವರ: ಮಂಜೇಶ್ವರದ ಸ್ನೇಹಾಲಯ ವ್ಯಸನಮುಕ್ತ ಕೇಂದ್ರವು ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಜಾಗೃತಿ ಕಾರ್ಯಕ್ರಮದ ಮೂಲಕ ಆಚರಿಸಿತು. ಈ ಕಾರ್ಯಕ್ರಮವು ತಡೆಗಟ್ಟುವಿಕೆ, ಚಿಕಿತ್ಸೆ ಹಾಗೂ ಪುನರ್ವಸತಿಯ ಮಹತ್ವವನ್ನು ಒತ್ತಿಹೇಳಿತು.

ಕಾರ್ಯಕ್ರಮವು ಕ್ಲಿನಿಕಲ್ ವಿಭಾಗದ ಮುಖ್ಯಸ್ಥರಾದ ಕ್ಲಿಂಟ್ ಜೋಸೆಫ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ವೈದ್ಯಾಧಿಕಾರಿ ಹಾಗೂ ಮನೋವೈದ್ಯರಾದ ಡಾ. ಬಾಲಸುಬ್ರಹ್ಮಣ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾದಕ ವಸ್ತುಗಳ ದುರುಪಯೋಗವನ್ನು ತಡೆಯಲು ಸಮೂಹಿಕ ಪ್ರಯತ್ನಗಳ ಅಗತ್ಯತೆಯನ್ನು ಒತ್ತಿಹೇಳಿದರು. ಸ್ನೇಹಾಲಯದ ಸಂಸ್ಥಾಪಕರೂ ಆಗಿರುವಂತಹ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಶುಭಾಶಯ ಭಾಷಣವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಹಾಗೂ ಕಾರ್ಯದರ್ಶಿಯಾದ ಒಲಿವಿಯಾ ಕ್ರಾಸ್ತಾ, ಟ್ರಸ್ಟಿಯಾದ ಜೋವಿಯಲ್ ಕ್ರಾಸ್ತಾ, ಟ್ರಸ್ಟಿ ಹಾಗೂ ಸ್ನೇಹಾಲಯ ವ್ಯಸನಮುಕ್ತ ಕೇಂದ್ರದ ಆಡಳಿತಾಧಿಕಾರಿನಿಯಾದ ಕುಮಾರಿ ಸರಿತಾ ಕ್ರಾಸ್ತಾ, ಸಂಸ್ಥೆಯ ಉಸ್ತುವಾರಿ ಲವಿಟ ಡಿ’ಸೋಜಾ ಹಾಗೂ ಯೋಗ ಮತ್ತು ವೆಲ್‌ನೆಸ್ ತರಬೇತುದಾರರಾದ ಡಾ. ಚಂದ್ರಶೇಖರ್ ಉಪಸ್ಥಿತರಿದ್ದರು.

ಕೇಂದ್ರದ ನಿವಾಸಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಭೆ ಹಾಗೂ ಚೇತರಿಕೆಯ ಪಯಣವನ್ನು ಅನಾವರಣಗೊಳಿಸಿದರು. ಕ್ಲಿನಿಕಲ್ ವಿಭಾಗವು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ವಿಜ್, ಪ್ರಬಂಧ ಬರವಣಿಗೆ, ಕವನ ರಚನೆ ಹಾಗೂ ನಾಟಕ ಸ್ಪರ್ಧೆಗಳನ್ನು ಆಯೋಜಿಸಿತು.
ಮನೋವೈದ್ಯಕೀಯ ಸಲಹೆಗಾರರಾದ ಆನಂದ್ ಅವರು ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಸಮಾಪಿಸಿದರು. ಈ ಆಚರಣೆಯು ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮತ್ತು ಚೇತರಿಕೆಯ ಹಾದಿಯಲ್ಲಿರುವ ವ್ಯಕ್ತಿಗಳಿಗೆ ಬೆಂಬಲ ನೀಡುವ ಸ್ನೇಹಾಲಯದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.