
ಮಂಗಳೂರು: ರೋಹನ್ ಕಾರ್ಪೋರೇಷನ್ ಇವೆಂಟ್ ನಲ್ಲಿ ಪಾಲ್ಗೊಂಡ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಸುರಿದ ಭಾರೀ ಮಳೆಯ ನಡುವೆ ಮಿಂಚು ಹರಿಸಿದರು.
‘ನಮಸ್ಕಾರ ಮಂಗಳೂರು ಎಂಚ ಉಲ್ಲರ್?’ ಎಂದು ತುಳುವಿನಲ್ಲೇ ಮಾತು ಆರಂಭಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರಿನಲ್ಲಿ ತೆಗೆದ ಬಾಲ್ಯದ ಫೋಟೋ ಪ್ರದರ್ಶಿಸಿದ ಬಾಲಿವುಡ್ ಬಾದ್ ಶಾ ತಾವು ಮಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದಾಗಿ ಹೇಳಿದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದರು.
ಮಂಗಳೂರಿನೊಂದಿಗೆ ತಮ್ಮ ಬಾಲ್ಯದ ಬಾಂಧವ್ಯವನ್ನು ಭಾವುಕರಾಗಿ ನೆನಪಿಸಿಕೊಂಡ ಅವರು ತಾವು ಕೇವಲ ಎರಡು ವರ್ಷದ ಆಸುಪಾಸಿನಲ್ಲಿದ್ದಾಗ ಮಂಗಳೂರಿನಲ್ಲಿ ತೆಗೆದಿದ್ದ ಬಾಲ್ಯದ ಅಪರೂಪದ ಫೋಟೋವನ್ನು ವೇದಿಕೆಯಲ್ಲಿ ಪ್ರದರ್ಶಿಸಿದ ಅವರು, “ನನ್ನ ಬಳಿ ಇರುವ ಬಾಲ್ಯದ ಏಕೈಕ ಫೋಟೋಗಳು ಮಂಗಳೂರಿನಲ್ಲಿ ತೆಗೆದವು. ಆದ್ದರಿಂದ ಈ ನಗರ ನನಗೆ ತುಂಬಾ ವಿಶೇಷ” ಎಂದರು.

ರೋಹನ್ ಕಾರ್ಪೊರೇಶನ್ ಆಯೋಜಿಸಿದ್ದ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಂಗಳೂರು ತಲುಪಿದ ಕ್ಷಣದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಜನರು ನೀಡಿದ ಆತ್ಮೀಯ ಸ್ವಾಗತವನ್ನು ಮರೆಯಲಾಗದು ಎಂದರು.
ರೋಹನ್ ಕಾರ್ಪೊರೇಶನ್ ಸಂಸ್ಥಾಪಕ ಡಾ. ರೋಹನ್ ಮೊಂತೇರೊ, ನಿರ್ದೇಶಕ ಡಿಯಾನ್ ಮೊಂತೇರೊ ಹಾಗೂ ಸಂಸ್ಥೆಯ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಶಾರುಖ್ ಖಾನ್, ಸಂಸ್ಥೆಯ ಮಹತ್ವಾಕಾಂಕ್ಷೆಯ ‘ಮರೀನಾ’ ಯೋಜನೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
“ನಾನು ತುಂಬಾ ಚಿಕ್ಕವನಿದ್ದ ಕಾರಣ ಇಲ್ಲಿನ ನೆನಪುಗಳು ಸ್ಪಷ್ಟವಾಗಿ ಇಲ್ಲ. ನನ್ನ ತಾತ ಆಗಿನ ಮಂಗಳೂರು ಬಂದರು ನಿರ್ಮಾಣ ಕಾರ್ಯಕ್ಕೆ ಮುಖ್ಯ ಎಂಜಿನಿಯರ್ ಆಗಿದ್ದರು. ಆ ಕಾರಣದಿಂದ ನಮ್ಮ ಕುಟುಂಬ ಕೆಲ ವರ್ಷಗಳ ಕಾಲ ಮಂಗಳೂರಿನಲ್ಲಿ ವಾಸಿಸಿತ್ತು” ಎಂದು ಹೇಳಿದರು.
ರೋಹನ್ ಮೊಂತೇರೊ ತಮ್ಮನ್ನು ಮಂಗಳೂರಿನ ಬಗ್ಗೆ ಪರಿಚಯಿಸಿದ್ದನ್ನು ನೆನಪಿಸಿಕೊಂಡ ಶಾರುಖ್ ಖಾನ್, “ಈ ಬಾರಿ ಹಳೆಯ ನೆನಪುಗಳು ಹೆಚ್ಚು ಇಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಮಂಗಳೂರಿಗೆ ಬಂದು ಹೊಸ ನೆನಪುಗಳನ್ನು ಕಟ್ಟಿಕೊಳ್ಳಲು ಬಯಸುತ್ತೇನೆ” ಎಂದರು.

ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಶಾರುಖ್ ಖಾನ್, ಮಂಗಳೂರಿನಂತಹ ನಗರಗಳಿಂದಲೂ ಜಾಗತಿಕ ಮಟ್ಟದ ಸಾಧನೆ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಖಂಡಿತ ಸಾಧ್ಯ. ನಿಮ್ಮ ಕನಸುಗಳನ್ನು ಎಂದಿಗೂ ಕೈಬಿಡಬೇಡಿ. ಜನರು ಹಲವು ಕಾರಣಗಳನ್ನು ಹೇಳಿ ನಿಮ್ಮನ್ನು ತಡೆಯಲು ಪ್ರಯತ್ನಿಸಬಹುದು. ಆದರೆ ನಿಮ್ಮ ಕನಸಿಗೆ ಕನಿಷ್ಠ ಒಂದು ಅವಕಾಶ ಕೊಡಿ. ಪ್ರಯತ್ನಿಸದೆ ಹಿಂದೆ ಸರಿಯಬೇಡಿ” ಎಂದು ಯುವಕರಿಗೆ ಸ್ಪೂರ್ತಿ ತುಂಬಿದರು.
