
ವಿಟ್ಲ: ನಿಲ್ಲಿಸಿದ್ದ ಟಿಪ್ಪರ್ ಲಾರಿಯೊಂದು ಏಕಾಏಕಿ ತನ್ನಿಂತಾನೇ ಚಲಿಸಿದ ಪರಿಣಾಮ, ಅದರ ಚಕ್ರದಡಿಗೆ ಸಿಲುಕಿ ಚಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು–ಪೆರೋಡಿ ಸರವುಗುಡ್ಡೆ ಪ್ರದೇಶದಲ್ಲಿ ಗುರುವಾರ ಸಂಭವಿಸಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಬಂದಾರು ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.
ಜೂನ್ 18ರಂದು ಗುರುವಾರ ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ. ಕನ್ಯಾನ ಗ್ರಾಮದ ಪಾದೆಕಲ್ಲು–ಪೆರೋಡಿ ಸರವುಗುಡ್ಡೆ ಪ್ರದೇಶದಲ್ಲಿ ಹೊರರಾಜ್ಯಗಳಿಗೆ ಸಾಗಿಸಲಾಗುತ್ತಿದ್ದ ಮಣ್ಣಿನ ತೆರವು ಕಾರ್ಯ ನಡೆಯುತ್ತಿತ್ತು. ಈ ಕಾಮಗಾರಿಗಾಗಿ ಮಹೇಶ್ ಚಾಲನೆ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಸ್ಥಳಕ್ಕೆ ತರಲಾಗಿತ್ತು.
ಈ ವೇಳೆ ಟಿಪ್ಪರ್ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಾಹನವನ್ನು ನಿಲ್ಲಿಸಿದ ಮಹೇಶ್ ಅವರು ಅದರ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಲಾರಿಯ ಕೆಳಭಾಗಕ್ಕೆ ಇಳಿದು ದೋಷ ಸರಿಪಡಿಸುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಟಿಪ್ಪರ್ ಹಿಂದಕ್ಕೆ ಚಲಿಸಲು ಆರಂಭಿಸಿದೆ.

ಅನಿರೀಕ್ಷಿತವಾಗಿ ಚಲಿಸಿದ ಲಾರಿಯ ಮುಂದಿನ ಚಕ್ರದಡಿಗೆ ಮಹೇಶ್ ಸಿಲುಕಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿದ್ದ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಳಿಕ ಲಾರಿಯ ಅಡಿಯಿಂದ ಮೃತದೇಹವನ್ನು ಹೊರತೆಗೆದು ವಿಟ್ಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.