
ಸುಬ್ರಮಣ್ಯ: ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಸಮೀಪ KA-13 D 1923 ನೊಂದಣಿ ಸಂಖ್ಯೆಯ ಪಿಕಪ್ ವಾಹನ ಆಯತಪ್ಪಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ವಾಹನವನ್ನು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಗಳಾದ ವಾಹನದ ಚಾಲಕ ಚಂದ್ರು @ಚಂದ್ರಶೇಖರ ಮತ್ತು ಕ್ಲೀನರ್ ಮೋಹನ ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಸದರಿ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿರುವ ಕುರಿತು ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಅವರಿಗೆ ಮಾಹಿತಿ ದೊರೆತ ಹಿನ್ನೆಲೆ, ಚಾಲಕ ಹಾಗೂ ಕ್ಲೀನರ್ ಅವರನ್ನು ಕೂಲಂಕುಷವಾಗಿ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆರೋಪಿತರು ಯಾವುದೇ ಪರವಾನಗಿ ಇಲ್ಲದೆ 02 ಜಾನುವಾರುಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದು, ವಾಹನ ಆಯತಪ್ಪಿ ಬಿದ್ದ ಸಂದರ್ಭ ಜಾನುವಾರುಗಳನ್ನು ವಾಹನದಿಂದ ಇಳಿಸಿ ಓಡಿಸಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳದ ಸ್ವಲ್ಪ ದೂರದಲ್ಲಿ ಸದರಿ 02 ಜಾನುವಾರುಗಳನ್ನು ಪತ್ತೆ ಹಚ್ಚಿ, ಕೃತ್ಯಕ್ಕೆ ಬಳಸಿದ ಪಿಕಪ್ ವಾಹನ ಹಾಗೂ ಜಾನುವಾರುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 21/2025 ರಂತೆ ಕಲಂ: 4, 5, 7, 12 ಕರ್ನಾಟಕ ಗೋವುಗಳ ಸಂರಕ್ಷಣಾ ಮತ್ತು ಜಾನುವಾರು ಪ್ರತಿಬಂಧಕ ಕಾಯ್ದೆ-2020, ಕಲಂ: 11(1)(D) ಪ್ರಾಣಿ ಸಂರಕ್ಷಣಾ ಕಾಯ್ದೆ-1960 ಹಾಗೂ ಕಲಂ: 66, 192(A) ಭಾರತೀಯ ಮೋಟಾರು ವಾಹನ ಕಾಯ್ದೆ-1988 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
