
ಬೆಂಗಳೂರು: ಮದುವೆಯಾಗಿ ಮಕ್ಕಳಿದ್ದರೂ ಇನ್ಸ್ಟಾಗ್ರಾಮ್ ಸುಂದರಿಯನ್ನು ಬಲೆಗೆ ಕೆಡವಿದ ರಿಕ್ಷಾ ಚಾಲಕನೊಬ್ಬ ಆಕೆಯೊಂದಿಗೆ ಗುಟ್ಟಾಗಿ ಸಂಸಾರ ಮಾಡಿದ್ದೂ ಅಲ್ಲದೆ ಕೊನೆಗೆ ಆಕೆಗೆ ನಿಜ ಸಂಗತಿ ತಿಳಿದು ಬೇರೆ ಮದುವೆಗೆ ಮುಂದಾಗುತ್ತಲೇ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ಆರೋಪಿ ತಾನೂ ವಿಷ ಸೇವಿಸಿ ಆತ್ಮಹತ್ಯೆಯ ನಾಟಕವಾಡಲು ಯತ್ನಿಸಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ತಿಗಳರಪಾಳ್ಯದ ತುಳಸಿನಗರದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಭವಾನಿ ಕೊಲೆಯಾದ ದುರ್ದೈವಿಯಾಗಿದ್ದಾಳೆ.
ಘಟನೆಯ ಹಿನ್ನೆಲೆ:
ಮೊಬೈಲ್ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಭವಾನಿಗೆ ಕೆಲವು ತಿಂಗಳ ಹಿಂದೆ ರಿಕ್ಷಾ ಚಾಲಕ ಚಂದನ್ ಅಲಿಯಾಸ್ ಚಂದ್ರಶೇಖರ್ ಎಂಬ ಯುವಕನ ಪರಿಚಯವಾಗಿತ್ತು. ರಿಕ್ಷಾ ಚಾಲನೆ ವೇಳೆ ಓಟಿಪಿ ಕಳಿಸಿ ನಂಬರ್ ಪಡೆದಿದ್ದ ಚಂದನ್ಆಲ್ ಆಕೆಯನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಆದರೆ ಚಂದನ್ ಗೆ ಮದುವೆಯಾಗಿ ಮಕ್ಕಳಿದ್ದರೂ ಅದನ್ನು ಮುಚ್ಚಿಟ್ಟು ಪ್ರೀತಿಯ ನಾಟಕವಾಡಿ ಮಾಡುವೆಯೂ ಆಗಿದ್ದ. ಆಕೆಯನ್ನು ಬಾಡಿಗೆ ಮನೆಯಲ್ಲಿರಿಸಿ ಸಂಸಾರ ಮಾಡುತ್ತಿದ್ದ. ಕೊನೆಗೊಂದು ದಿನ ಚಂದನ್ ಗೆ ಮದುವೆಯಾಗಿದ್ದನ್ನು ತಿಳಿದು ಭವಾನಿ ಜಗಳವಾಡಿದ್ದಳು. ಆದರೆ ಆಕೆಯನ್ನು ಸಮಾಧಾನ ಪಡಿಸಿದ್ದ ಚಂದನ್ ಮತ್ತೆ ಸಂಸಾರ ಮುಂದುವರಿಸಿದ್ದ. ಈ ಮಧ್ಯೆ ಊರಲ್ಲಿ ಭವಾನಿಗೆ ಮದುವೆ ಮಾಡಲು ಹೆತ್ತವರು ಮುಂದಾಗಿದ್ದು ಅದಕ್ಕೆ ಭವಾನಿ ಒಪ್ಪಿಗೆ ನೀಡಿದ್ದಳು. ಇನ್ನು ಕೆಲವೇ ದಿನಗಳಲ್ಲಿ ನಿಶ್ಚಿತಾರ್ಥ ನಡೆಯುವುದರಲ್ಲಿತ್ತು. ಇದು ತಿಳಿದ ಚಂದನ್ ನಾವು ವಿಷ ಕುಡಿದು ಸಾಯೋಣ ಎಂದು ನಂಬಿಸಿ ಮೊದಲು ಭವಾನಿಗೆ ವಿಷ ಕುಡಿಸಿದ್ದು ಆಕೆ ವಾಂತಿ ಮಾಡಲು ಆರಂಭಿಸಿದ್ದಳು. ಈ ವೇಳೆ ಆಕೆಯನ್ನು ಕತ್ತು ಹಿಡಿದು ಕೊಲೆಗೈದ ಚಂದನ್ ಬಳಿಕ ತಾನು ಸ್ವಲ್ಪ ವಿಷ ಸೇವಿಸಿದ್ದ ಎನ್ನಲಾಗಿದೆ.
ಅದಕ್ಕೂ ಮುನ್ನ ಭವಾನಿಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮದುವೆಯ ಫೋಟೋವನ್ನು ಚಂದನ್ ‘ಸ್ಟೋರಿ’ ರೂಪದಲ್ಲಿ ಅಪ್‌ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಭವಾನಿಯ ಸಂಬಂಧಿಕರು ತಕ್ಷಣ ಅದರ ಸ್ಕ್ರೀನ್‌ಶಾಟ್ ತೆಗೆದು ಆಕೆಯ ತಾಯಿಗೆ ಕಳುಹಿಸಿದ್ದಾರೆ. ಫೋಟೋ ನೋಡಿ ಆತಂಕಗೊಂಡ ತಂದೆ ಶ್ರೀನಿವಾಸ್ ಅವರು ತಕ್ಷಣ ಮಗಳಿಗೆ ಕರೆ ಮಾಡಿದ್ದಾರಾದರೂ, ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮಗಳ ಫೋನ್ ಕನೆಕ್ಟ್ ಆಗದಿದ್ದಾಗ ಅನುಮಾನಗೊಂಡ ಪೋಷಕರು, ತಕ್ಷಣ ಆಕೆ ಇದ್ದ ರೂಮಿನ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮನೆ ಮಾಲೀಕರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಭವಾನಿ ಮೃತದೇಹವಾಗಿ ಬಿದ್ದಿದ್ದರೆ, ಆಕೆಯ ಪಕ್ಕದಲ್ಲೇ ಚಂದನ್ ನರಳಾಡುತ್ತಿದ್ದ. ತಕ್ಷಣವೇ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಯ ನಾಟಕವಾಡಲು ಯತ್ನ?
ಪ್ರಾಥಮಿಕ ತನಿಖೆಯ ಪ್ರಕಾರ, ಚಂದನ್ ಮೊದಲು ಭವಾನಿಯ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆ ಬಳಿಕ ಇದನ್ನು ಜಂಟಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಇಲ್ಲವೇ ಕೊಲೆಯ ನಂತರ ತಾನು ಸಿಕ್ಕಿಬೀಳುವ ಭೀತಿಯಿಂದ ವಿಷ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತಕ್ಷಣವೇ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭವಾನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
