
ಬೆಂಗಳೂರು : ಕೃಷಿಯ ಉಳಿವು, ಪರಿಸರ ಸಂರಕ್ಷಣೆ ಮತ್ತು ದೇಶದ ಆರ್ಥಿಕ ಪ್ರಗತಿಯಲ್ಲಿ ರೈತರ ಪಾತ್ರದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಐತಿಹಾಸಿಕ ಫ್ರೀಡಂ ಪಾರ್ಕ್‌ನಲ್ಲಿ ಜೂನ್ 14ರಂದು ಭಾನುವಾರ ವಿಶೇಷ ‘ಸ್ಟೂಡೆಂಟ್ಸ್ ಫಾರ್ಮರ್ಸ್ ವಾಕಥಾನ್’ (ವಿದ್ಯಾರ್ಥಿ-ರೈತರ ನಡಿಗೆ) ಆಯೋಜಿಸಲಾಗಿದೆ.

ಈ ನಡಿಗೆಯು ಕೇವಲ ಒಂದು ಕಾರ್ಯಕ್ರಮವಾಗಿರದೆ, ಅನ್ನದಾತ ಮತ್ತು ಮುಂದಿನ ಪೀಳಿಗೆಯಾದ ವಿದ್ಯಾರ್ಥಿಗಳ ನಡುವೆ ಭಾಂದವ್ಯ ಬೆಸೆಯುವ ವಿಶಿಷ್ಟ ವೇದಿಕೆಯಾಗಲಿದೆ. ಇಂದಿನ ಯುವ ಪೀಳಿಗೆಯಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವುದು ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಪರಿಸರ ಜಾಗೃತಿ ಮೂಡಿಸುವುದು ಈ ವಾಕಥಾನ್‌ನ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
ಒಂದೇ ವೇದಿಕೆಯಲ್ಲಿ ಕೃಷಿಕರು-ವಿದ್ಯಾರ್ಥಿಗಳು: ರೈತರು, ಕೃಷಿ ತಜ್ಞರು ಮತ್ತು ವಿದ್ಯಾರ್ಥಿಗಳು ಮುಖಾಮುಖಿಯಾಗಿ ಕೃಷಿಯ ಸವಾಲು ಹಾಗೂ ತಂತ್ರಜ್ಞಾನಗಳ ಕುರಿತು ಸಂವಾದ ನಡೆಸಲಿದ್ದಾರೆ.
ಸಾಧಕರ ಅನುಭವದ ನುಡಿ: ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಪ್ರಮುಖರು ಮತ್ತು ತಜ್ಞರು ಭಾಗವಹಿಸಿ ಯುವಜನತೆಗೆ ಮಾರ್ಗದರ್ಶನ ನೀಡಲಿದ್ದಾರೆ.

ರೈತರ ಶ್ರಮಕ್ಕೆ ಗೌರವ: ದೇಶದ ಬೆನ್ನೆಲುಬಾದ ರೈತ ಸಮುದಾಯದ ಕೊಡುಗೆಯನ್ನು ಸ್ಮರಿಸಿ, ಗೌರವಿಸುವ ವಿಶೇಷ ಪ್ರಯತ್ನ ಇದಾಗಿದೆ.
ಪ್ರಕೃತಿ ಮತ್ತು ಪ್ರಗತಿಯನ್ನು ಬೆಸೆಯುವ ಈ ಮಹತ್ವದ ನಡಿಗೆಯಲ್ಲಿ ಸಾರ್ವಜನಿಕರು, ಪರಿಸರ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
