
ಮಂಗಳೂರು: ಮಂಗಳೂರಿನ ಅಂಡರ್‌ವರ್ಲ್ಡ್ ಕಥೆಗಳಿಗಿಂತಲೂ ರೋಚಕವಾದ, ಬೆಚ್ಚಿಬೀಳಿಸುವ ಹೈಪ್ರೊಫೈಲ್ ಬ್ಲಾಕ್‌ಮೇಲ್ ದಂಧೆಯೊಂದು ಕರಾವಳಿಯ ಕಡಲತೀರದಲ್ಲಿ ಬಯಲಾಗಿದೆ.
ಮರ್ಯಾದೆ, ದುಡ್ಡು, ಅಧಿಕಾರ ಮತ್ತು ರಾಜಕೀಯದ ಜುಗಲ್‌ಬಂದಿಯಲ್ಲಿ ಸಿಲುಕಿ ಉದ್ಯಮಿಯೊಬ್ಬರು ಬರೋಬ್ಬರಿ ಎರಡು ಮುಕ್ಕಾಲು ಕೋಟಿ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಇಡೀ ಸಲಿಂಗಕಾಮದ ಸುಲಿಗೆ ದಂಧೆಯ ಹಿಂದೆ ಇರುವುದು ಮತ್ಯಾರೋ ಅಲ್ಲ, ರಾಜಕೀಯದ ಪಾದರಸದಂತಿದ್ದ ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಮತ್ತು ಆತನ ಆಪ್ತ ಗೆಳೆಯ ಜಿತೇಶ್!
ಈ ಕಥೆಯ ಅಸಲಿ ವಿಲನ್ ನಿಝಾಮ್ ಕೇವಲ ಬ್ಲಾಕ್‌ಮೇಲರ್ ಮಾತ್ರವಲ್ಲ, ರಾಜಕೀಯದ ಗಾಳಿ ಯಾವ ಕಡೆ ಬೀಸುತ್ತದೋ ಆ ಕಡೆ ವಾಲಿಬಿಡುವ ಪಕ್ಕಾ ಮುತ್ಸದ್ದಿ. ಒಂದು ಕಾಲದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ನೆರಳಿನಂತೆ ಬಾವಾ ಜೊತೆಗೇ ಗುರುತಿಸಿಕೊಂಡಿದ್ದ ಈತ, ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿಗೆ ತನ್ನ ಅಸಲಿ ಬಣ್ಣ ತೋರಿಸಿದ್ದ.
ಬಾವಾಗೆ ನೇರವಾಗಿಯೇ ಕೈಕೊಟ್ಟ ಈ ಚತುರ, ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಆಲಿ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಾಳಯಕ್ಕೆ ಜಿಗಿದಿದ್ದ. ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯ ಪಟ್ಟ ಗಿಟ್ಟಿಸಿಕೊಂಡು, ರಾಜ್ಯದ ಘಟಾನುಘಟಿ ನಾಯಕರ ಜೊತೆ ಫೋಟೋ ತೆಗೆಸಿಕೊಳ್ಳುತ್ತಾ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದ. ಆದರೆ, ಈ ಖಾದಿ ಅಂಗಿಯ ಹಿಂದೆ ಅಡಗಿದ್ದದ್ದು ಒಬ್ಬ ಕ್ರಿಮಿನಲ್ ಎಂಬುದನ್ನು ಖಾಕಿ ಪಡೆ ಈಗ ಬಯಲು ಮಾಡಿದೆ.
ಕಥೆ ಶುರುವಾಗಿದ್ದು 2024ರಲ್ಲಿ. ಜಿತೇಶ್ ಎಂಬ ಯುವಕ ಮಂಗಳೂರಿನ ಹೆಸರಾಂತ ಉದ್ಯಮಿಯೊಬ್ಬರ ಅಂತರಂಗದ ಕೋಣೆಗೆ ಲಗ್ಗೆ ಇಟ್ಟು, ಅವರ ಸಲಿಂಗಕಾಮದ ಖಾಸಗಿ ವಿಡಿಯೋಗಳನ್ನು ಗುಪ್ತವಾಗಿ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ. ಸಂಪ್ರದಾಯಸ್ಥ ಕುಟುಂಬದ ಉದ್ಯಮಿಗೆ ಮರ್ಯಾದೆಯದ್ದೇ ಭಯ. ಮೊದಲ ಹಂತದಲ್ಲೇ ಜಿತೇಶ್ 35 ಲಕ್ಷ ರೂಪಾಯಿ ಕುಕ್ಕಿದ್ದ. ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದಾಗ, ಬೆದರಿದ ಉದ್ಯಮಿ ತನಗೆ ಆಪ್ತನಾಗಿದ್ದ ಇದೇ ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಬಳಿ ಹೋಗಿ, “ನನ್ನನ್ನು ಈ ಸಂಕಷ್ಟದಿಂದ ಪಾರು ಮಾಡು” ಎಂದು ಅಂಗಲಾಚಿದ್ದರು.
ಉದ್ಯಮಿಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ನಿಝಾಮ್, ಜಿತೇಶ್ ಜೊತೆ ಕೈಜೋಡಿಸಿ ಸಿನೆಮಾ ಸ್ಟೈಲ್‌ನಲ್ಲಿ ಸ್ಕೆಚ್ ಹಾಕಿದ. “ನಿಮ್ಮ ಅಶ್ಲೀಲ ವಿಡಿಯೋ ವಿಚಾರವಾಗಿ ಜಿತೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಪೊಲೀಸರು ನಿಮ್ಮನ್ನು ಜೈಲಿಗೆ ತಳ್ಳಲು ಕಾಯುತ್ತಿದ್ದಾರೆ” ಎಂದು ಉದ್ಯಮಿಯ ಎದೆಬಡಿತ ಹೆಚ್ಚಿಸಿದ.
ಅಷ್ಟಕ್ಕೇ ನಿಲ್ಲದೆ, ಜಿತೇಶ್ ನೇಣು ಬಿಗಿದುಕೊಂಡಿರುವ ನಕಲಿ ಫೋಟೋ ಮತ್ತು ಸುಳ್ಳು ಅಂತ್ಯಕ್ರಿಯೆಯ ದೃಶ್ಯಗಳನ್ನು ಸೃಷ್ಟಿಸಿ ಉದ್ಯಮಿಯ ಕಣ್ಣೆದುರು ಹಿಡಿದಿದ್ದ.
ಸತ್ತವನು ಎದುರು ಸಿಕ್ಕಾಗ…!
ಕೇಸ್, ಕೋರ್ಟ್, ಜೈಲು ಎಂದು ಹೆದರಿದ ಉದ್ಯಮಿ, ಕಳೆದ ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿಗಳನ್ನು ಈ ನಿಝಾಮ್ ಪಾದಕ್ಕೆ ಸುರಿದಿದ್ದರು. ಇತ್ತ ಜಿತೇಶ್ ಸತ್ತ ನಾಟಕವಾಡಿ ಭೂಗತನಾಗಿದ್ದ. ಆದರೆ, ಪಾಪದ ಕೊಡ ತುಂಬಿದಾಗ ಸತ್ಯ ಹೊರಬರಲೇಬೇಕಲ್ಲ?
ಕಳೆದ ಕೆಲವು ದಿನಗಳ ಹಿಂದಷ್ಟೇ ಮಂಗಳೂರಿನ ರಸ್ತೆಯೊಂದರಲ್ಲಿ, ಉದ್ಯಮಿಗೆ ತಾನು ‘ಸತ್ತು ಹೋಗಿದ್ದಾನೆ’ ಎಂದು ನಂಬಿದ್ದ ಜಿತೇಶ್ ಆರಾಮವಾಗಿ ಓಡಾಡುತ್ತಿರುವುದು ಕಣ್ಣಿಗೆ ಬಿದ್ದಿದೆ! ಆಗಲೇ ಉದ್ಯಮಿಗೆ ತಾನು ಮಹಾವಿಶ್ವಾಸ ದ್ರೋಹಕ್ಕೆ ಒಳಗಾಗಿರುವುದು ಮತ್ತು ಕೋಟಿ ಕೋಟಿ ಹಣ ಲೂಟಿಯಾಗಿರುವುದು ಅರ್ಥವಾಗಿದ್ದು.
ತಕ್ಷಣವೇ ಅವರು ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ಯಕ್ಕೆ ಪೊಲೀಸರು ನಿಝಾಮ್ ಮತ್ತು ಜಿತೇಶ್ ಇಬ್ಬರನ್ನೂ ಕಂಬಿ ಎಣಿಸುವಂತೆ ಮಾಡಿದ್ದಾರೆ. ರಾಜಕೀಯದ ಮುಖವಾಡ ಕಳಚಿದಾಗ ಈ ಯುವ ನಾಯಕನ ಅಸಲಿ ಮುಖ ನೋಡಿ ಇಡೀ ಕರಾವಳಿ ಜಗತ್ತು ಉಗುಳುತ್ತಿದೆ. ಖಾಕಿ ಪಡೆಯ ತನಿಖೆ ಮುಂದುವರಿದಿದ್ದು, ಈ ಹನಿಟ್ರ್ಯಾಪ್ ಮಾಫಿಯಾದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಎನ್ನುವುದು ಹೊರಬರಬೇಕಿದೆ.
