ʻಜಿರಳೆʼಗಳ ವಕ್ತಾರರಾಗಿ ಮೂವರ ನೇಮಕ

ನವದೆಹಲಿ: ದೆಹಲಿಯಲ್ಲಿ ಈ ವಾರದ ಕೊನೆಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೂ ಮುನ್ನ, ಮಾಧ್ಯಮ ಮತ್ತು ಸಾರ್ವಜನಿಕರ ಮುಂದೆ ಸಂಘಟನೆಯನ್ನು ಪ್ರತಿನಿಧಿಸಲು ಮೂವರು ಪ್ರಮುಖ ಅಧಿಕೃತ ವಕ್ತಾರರ ಹೆಸರನ್ನು “ಕಾಕ್ರೋಚ್ ಜನತಾ ಪಾರ್ಟಿ” (CJP) ಘೋಷಿಸಿದೆ.

ಪ್ರಸಿದ್ಧ ತನಿಖಾ ಪತ್ರಕರ್ತ ಸೌರವ್ ದಾಸ್ ಅವರನ್ನು ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದ್ದು, ರಾಜಕೀಯ ಸಂಶೋಧಕಿ ಹಾಗೂ ಚಲನಚಿತ್ರ ನಿರ್ಮಾಪಕಿ ವಿಜೇತಾ ದಹಿಯಾ ಮತ್ತು ಪ್ರಖ್ಯಾತ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಅಶುತೋಷ್ ರಂಕಾ (ಐಐಟಿ ಕಾನ್ಪುರ ಹಳೆಯ ವಿದ್ಯಾರ್ಥಿ) ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.

ಪರೀಕ್ಷಾ ಅಕ್ರಮಗಳು, ನಿರುದ್ಯೋಗ ಮತ್ತು ಆಡಳಿತಾತ್ಮಕ ಜವಾಬ್ದಾರಿಯ ಕುರಿತು ತೀವ್ರ ಹೋರಾಟ ರೂಪಿಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭೀಜೀತ್ ದಿಪ್ಕೆ ಅವರು ಜೂನ್ 6 ರಂದು ಭಾರತಕ್ಕೆ ಮರಳಲಿದ್ದು, ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಈ ಹೋರಾಟಕ್ಕೆ ದೇಶದ ಖ್ಯಾತ ಶಿಕ್ಷಣ ಸುಧಾರಕ ಹಾಗೂ ನಾವೀನ್ಯಕಾರ ಸೋನಮ್ ವಾಂಗ್ಚುಕ್ ಅವರು ಮುಕ್ತ ಬೆಂಬಲ ಘೋಷಿಸಿದ್ದಾರೆ.

ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ NEET, CBSE ಮತ್ತು CUET ಪರೀಕ್ಷಾ ವಿವಾದಗಳ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು. ಅವರ ರಾಜೀನಾಮೆಯ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಸ್ಥಾಪಕ ಅಭೀಜೀತ್ ದಿಪ್ಕೆ ಕಠಿಣ ನಿಲುವು ತಳೆದಿದ್ದಾರೆ

error: Content is protected !!