ಆರ್‌ಎಸ್‌ಎಸ್ ವಿರುದ್ಧ ತೊಡೆತಟ್ಟುವ ಹರಿಪ್ರಸಾದ್‌ಗೆ ಕೆಪಿಸಿಸಿ ಹೊಣೆ! ಬೆಳಗಾವಿ ಸಾಹುಕಾರ್‌ಗೆ ಬಿಗ್ ಶಾಕ್!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೈವೋಲ್ಟೇಜ್ ಸಂಚಲನವೊಂದು ಸೃಷ್ಟಿಯಾಗಿದ್ದು, ಕೆಪಿಸಿಸಿ ನೂತನ ಅಧ್ಯಕ್ಷ ಗಾದಿಗೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಬಹುತೇಕ ಫೈನಲ್ ಆಗಿದೆ ಎಂಬ ದಟ್ಟ ವದಂತಿಗಳು ಕೈ ಪಡಸಾಲೆಯಿಂದ ಹೊರಬಿದ್ದಿವೆ. ಆರ್‌ಎಸ್‌ಎಸ್ ಹಾಗೂ ಸಂಘಪರಿವಾರದ ಸದ್ಧಾಂತಗಳ ವಿರುದ್ಧ ಸದಾ ಕೆಂಡಕಾರುವ, ತೀಕ್ಷ್ಣ ವಾಗ್ದಾಳಿ ನಡೆಸುವ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಹೊಣೆ ಹೊರಿಸಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗುತ್ತಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.

ಕಳೆದ ಹಲವು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು, ತೀವ್ರ ಕಸರತ್ತು ನಡೆಸುತ್ತಿದ್ದ ಬೆಳಗಾವಿಯ ಸಾಹುಕಾರ್, ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಅಂತಿಮ ಕ್ಷಣದಲ್ಲಿ ಈ ಮಹತ್ವದ ಪಟ್ಟ ಕೈತಪ್ಪಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಬೇರೆಯದೇ ಲೆಕ್ಕಾಚಾರಕ್ಕೆ ಮುಂದಾಗಿದ್ದೇ ಜಾರಕಿಹೊಳಿ ಅವರಿಗೆ ಹಿನ್ನಡೆಯಾಗಲು ಕಾರಣ ಎನ್ನಲಾಗುತ್ತಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

‘ಬಿಲ್ಲವ’ ಕಾರ್ಡ್ ಪ್ಲೇ ಮಾಡಿದ ಎಐಸಿಸಿ
ರಾಜ್ಯದಲ್ಲಿ ಈ ಬಾರಿ ಒಬಿಸಿ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಎಐಸಿಸಿ (AICC) ಗಂಭೀರ ನಿರ್ಧಾರ ಕೈಗೊಂಡಿದೆ. ಅದರಲ್ಲೂ ಮುಖ್ಯವಾಗಿ ಕರಾವಳಿ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಭಾವಿ ಮತ್ತು ನಿರ್ಣಾಯಕ ಮತಬ್ಯಾಂಕ್ ಹೊಂದಿರುವ ಬಿಲ್ಲವ ಸಮುದಾಯದ ಬಿ.ಕೆ. ಹರಿಪ್ರಸಾದ್ ಅವರಿಗೆ ಮಣೆ ಹಾಕಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಒಲವು ಗಳಿಸಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಭರ್ಜರಿ ಗೆಲುವು ಸಾಧಿಸುವ ಬೃಹತ್ ಚುನಾವಣಾ ತಂತ್ರಗಾರಿಕೆಯ ಭಾಗವಾಗಿಯೇ ಹೈಕಮಾಂಡ್ ಈ ಮಾಸ್ಟರ್ ಪ್ಲಾನ್ ರೂಪಿಸಿದೆ ಎನ್ನಲಾಗಿದೆ. ಇಂದು ಸಂಜೆ ವೇಳೆಗೆ ಎಐಸಿಸಿಯಿಂದ ಹೊಸ ಅಧ್ಯಕ್ಷರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.

error: Content is protected !!