ಕನ್ಯಾಡಿಯಲ್ಲಿ ಜೂನ್ 7 ರಿಂದ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ

ಮಂಗಳೂರು: ಅಧಿಕ ಮಾಸದ ನಿಮಿತ್ತ ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ಜೂನ್ 7 ರಿಂದ ಜೂನ್ 13 ರವರೆಗೆ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ್ ಮಹಾರಾಜ್ ಹೇಳಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಹಾರಾಷ್ಟ್ರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಪಂಢರಪುರ, ಶ್ರೀ ಚೈತನ್ಯ ಸದ್ಗುರು ಹರದಾಸ್ವಾಮಿ ಹ. ಹಿರೇಹರಕರ ಬಹುಉದ್ದೇಶೀಯ ಸಂಸ್ಥೆ ಹಾಗೂ ಪಂಢರಪುರ ವತಿಯಿಂದ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಧಿಕ ಮಾಸದ ವಿಶೇಷ ಪ್ರಯುಕ್ತ ಜೂನ್ 7ರ ರವಿವಾರದಂದು (ಅಧಿಕ ಜ್ಯೇಷ್ಠ ಬಹುಳ ಸಪ್ತಮಿ) ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮೂದಾಯಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮಗಳಿಗೆ ಭಕ್ತಿಪೂರ್ವಕ ಚಾಲನೆ ಸಿಗಲಿದೆ. ತದನಂತರ ಜೂನ್ 13ರ ಶನಿವಾರ (ಅಧಿಕ ಜ್ಯೇಷ್ಠ ಬಹುಳ ತ್ರಯೋದಶಿ) ಮಹಾಮಂಗಳದೊಂದಿಗೆ ಈ ಧಾರ್ಮಿಕ ಸಪ್ತಾಹವು ಸಂಪನ್ನಗೊಳ್ಳಲಿದೆ ಎಂದು ಶ್ರೀಗಳು ವಿವರಿಸಿದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಜೂನ್ 7ರ ರವಿವಾರ ಬೆಳಗ್ಗೆ 7:00 ಗಂಟೆಗೆ ಸಂಸ್ಥೆಯ ವತಿಯಿಂದ ಪ್ರಪ್ರಥಮ ಬಾರಿಗೆ ಶ್ರೀ ಗ್ರಂಥರಾಜ “ಜ್ಞಾನೇಶ್ವರಿ” ಗ್ರಂಥದ ಮಹತ್ವದ ಬಿಡುಗಡೆ ಸಮಾರಂಭ ಜರುಗಲಿದೆ. ಈ ಸಮಸ್ತ ಧಾರ್ಮಿಕ ಕಾರ್ಯಕ್ರಮಗಳು ಮಹಾಮಂಡಲೇಶ್ವರ 1008 ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಹಾರಾಜರು (ಶ್ರೀ ಪಂಢರಿನಾಥ ಮಹಾರಾಜರು ಜುನಾಅಖಾಡಾ) ಅವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ್ ಶರದಾಸ್ವಾಮಿ ಹಿರೇಹರಕರ ಅವರ ನೇತೃತ್ವದಲ್ಲಿ ನೆರವೇರಲಿವೆ ಎಂದು ಅವರು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಆರ್ ಟಿ ಪಾಟೀಲ್, ರಮೇಶ್ ಅರಕೇರಿ, ಪಾಪು ಸಿಂಗ್ ರಜಪೂತ್, ಗೋಪಾಲ್, ತೇಜಪ್ಪ ಮಹಾರಾಜ್ ಹಾಗೂ ವಿನೋದ್ ಕುಮಾರ್ ಕಾಸರಗೋಡು ಸೇರಿದಂತೆ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.

error: Content is protected !!