
ಬಂಟ್ವಾಳ: ಮಂಗಳೂರು-ಸುಬ್ರಹ್ಮಣ್ಯ ರೈಲಿನ ಕೊನೆಯ ಬೋಗಿಯಲ್ಲಿ ಗಲಾಟೆ ಸೃಷ್ಟಿಸಿ, ಪ್ರಯಾಣಿಕನೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳನ್ನು ರೈಲ್ವೆ ರಕ್ಷಣಾ ಪಡೆ ಮಂಗಳವಾರ(ಜೂ. 2) ಬೆಳಗ್ಗೆ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ.

ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದ ಮೂವರು ವ್ಯಕ್ತಿಗಳು ಬೋಗಿಯೊಳಗೆ ತೀವ್ರ ಗದ್ದಲ ಎಬ್ಬಿಸುತ್ತಿದ್ದರು ಎಂದು ರೈಲ್ವೆ ಪೊಲೀಸರಿಗೆ ದೂರು ನೀಡಲಾಗಿತ್ತು. ರೈಲು ಬಂಟ್ವಾಳ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಜಾಗೃತರಾದ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ, ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ರೈಲನ್ನು ಬಂಟ್ವಾಳ ನಿಲ್ದಾಣದಲ್ಲಿ ಕೆಲವು ನಿಮಿಷಗಳ ಕಾಲ ಸ್ಥಗಿತಗೊಳಿಸಲಾಗಿತ್ತು.
