ಇನ್ನು ಮುಂದೆ ದ್ವೇಷ ಭಾಷಣ ಮಾಡಲ್ಲ: ಹೈಕೋರ್ಟ್‌ಗೆ ಕಲ್ಲಡ್ಕ ಪ್ರಭಾಕರ ಭಟ್ ಲಿಖಿತ ಭರವಸೆ

ಬೆಂಗಳೂರು: “ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ಅವರು ಎಲ್ಲೂ ದ್ವೇಷ ಭಾಷಣ (Hate Speech) ಮಾಡುವುದಿಲ್ಲ” ಎಂದು ಅವರ ಪರ ಹಿರಿಯ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಅಧಿಕೃತ ಭರವಸೆ (Undertaking) ನೀಡಿದ್ದಾರೆ. ಶ್ರೀರಂಗಪಟ್ಟಣದ ಉಪ್ಪಳಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್ (FIR) ರದ್ದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ನಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.

ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜ ಎಂಬುವರು ನೀಡಿದ್ದ ದೂರಿನನ್ವಯ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಹಿಂದೆ ಹೈಕೋರ್ಟ್ ಈ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿತ್ತು. ಮಂಗಳವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಾಗ, ದೂರುದಾರರ ಪರ ಹಿರಿಯ ವಕೀಲ ಎಸ್. ಬಾಲನ್ ಅವರು ತಡೆಯಾಜ್ಞೆ ತೆರವುಗೊಳಿಸುವಂತೆ ಬಲವಾದ ವಾದ ಮಂಡಿಸಿದರು.

’12 ಎಫ್‌ಐಆರ್ ಇವೆ, ತಡೆಯಾಜ್ಞೆ ದುರ್ಬಳಕೆ’: ದೂರುದಾರರ ಪರ ವಕೀಲರ ವಾದ
ವಿಚಾರಣೆ ವೇಳೆ ದೂರುದಾರರ ಪರ ವಕೀಲ ಎಸ್. ಬಾಲನ್, “ಕಲ್ಲಡ್ಕ ಪ್ರಭಾಕರ ಭಟ್ ಅವರು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ನಿರಂತರವಾಗಿ ವಿಷ ಕಾರುತ್ತಲೇ ಇರುತ್ತಾರೆ. ಸಮಾಜದಲ್ಲಿ ಸಹೋದರತೆಯಿಂದ ಇರುವ ವಾತಾವರಣವನ್ನು ಕೆಡಿಸುತ್ತಿದ್ದಾರೆ. ನ್ಯಾಯಾಲಯಗಳು ಅವರಿಗೆ ಜಾಮೀನು ಅಥವಾ ತಡೆಯಾಜ್ಞೆ ನೀಡಿದಾಗ, ಅದನ್ನು ಬಳಸಿಕೊಂಡು ಅವರು ಮತ್ತಷ್ಟು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ ದಾಖಲಾಗಿರುವ 12 ಎಫ್‌ಐಆರ್‌ಗಳ ಪಟ್ಟಿಯನ್ನು ನಾವು ಕೋರ್ಟ್‌ಗೆ ನೀಡಿದ್ದೇವೆ” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಪ್ರಭಾಕರ ಭಟ್ ಅವರು ಭಾಷಣದಲ್ಲಿ ಬಳಸಿದ್ದ ವಿವಾದಾತ್ಮಕ ಪದಗಳ ತುಣುಕನ್ನು ವಕೀಲರು ನ್ಯಾಯಾಲಯದಲ್ಲಿ ಓದಲು ಮುಂದಾದಾಗ, “ಮೈಕ್ ಆಫ್ ಮಾಡಿ ಓದಿ” ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಸಾರ್ವಜನಿಕವಾಗಿ ಕೇಳಲು ಸಾಧ್ಯವಾಗದ ರೀತಿಯ ವಿಷಕಾರಿ ಭಾಷಣಗಳನ್ನು ಅವರು ಸರಣಿಯಾಗಿ ಮಾಡುತ್ತಿರುವುದರಿಂದ ತಡೆಯಾಜ್ಞೆಯನ್ನು ತಕ್ಷಣ ತೆರವುಗೊಳಿಸಬೇಕು ಎಂದು ಬಾಲನ್ ಒತ್ತಾಯಿಸಿದರು.

‘ಭಟ್‌ಗೆ 83 ವರ್ಷ ಪ್ರಾಯ’: ತಡೆಯಾಜ್ಞೆ ಮುಂದುವರಿಕೆಗೆ ಮನವಿ
ಇದಕ್ಕೆ ಪ್ರತಿವಾದ ಮಂಡಿಸಿದ ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್, “ಪ್ರಭಾಕರ ಭಟ್ ಅವರಿಗೆ ಸದ್ಯ 83 ವರ್ಷ ಪ್ರಾಯವಾಗಿದೆ. ಹೀಗಾಗಿ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಎಲ್ಲಾ ಪ್ರಕರಣಗಳ ಜೋಡಣೆಗೆ ಹೈಕೋರ್ಟ್ ಆದೇಶ
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ರಾಜ್ಯದ ವಿವಿಧೆಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಇದೇ ಅರ್ಜಿಯೊಂದಿಗೆ ಜೋಡಿಸುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಆದೇಶಿಸಿದರು.

ಇದೇ ವೇಳೆ, ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿ ಪ್ರಭಾಕರ ಭಟ್ ಎಲ್ಲೂ ದ್ವೇಷ ಭಾಷಣ ಮಾಡದಂತೆ ನಿರ್ಬಂಧಿಸಿ ಕೋರ್ಟ್ ಆದೇಶ ಹೊರಡಿಸಬೇಕು ಎಂದು ಎಸ್. ಬಾಲನ್ ವಿನಂತಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಭಟ್ ಪರ ವಕೀಲ ಅರುಣ್ ಶ್ಯಾಮ್, “ಇನ್ನು ಮುಂದೆ ಕಲ್ಲಡ್ಕ ಪ್ರಭಾಕರ ಭಟ್ ಅವರು ಯಾವುದೇ ದ್ವೇಷ ಭಾಷಣ ಮಾಡುವುದಿಲ್ಲ” ಎಂದು ನ್ಯಾಯಪೀಠಕ್ಕೆ ಸ್ಪಷ್ಟ ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯ, ಭಟ್ ವಿರುದ್ಧದ ಎಲ್ಲಾ ಪ್ರಕರಣಗಳ ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿದೆ.

error: Content is protected !!