ಮುಂಬೈ: ಬಾಲಿವುಡ್‌ನ ಇತ್ತೀಚಿನ ಸೂಪರ್ ಹಿಟ್ ಸ್ಪೈ ಥ್ರಿಲ್ಲರ್ ಸಿನಿಮಾ ʻಧುರಂಧರ್’ (Dhurandhar) ಜಾಗತಿಕವಾಗಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಭೂಗತ ಪಾತಕಿಗಳ ಗುಂಪು ʻಡಿ-ಕಂಪನಿ’ (D-Company) ತೀವ್ರ ಆಕ್ರೋಶಗೊಂಡಿದೆ.

ಚಿತ್ರದ ಯಶಸ್ಸಿನ ಬೆನ್ನಲ್ಲೇ ಮುಂಬೈನಲ್ಲಿ ತನ್ನ ಹಳೆಯ ಜಾಲವನ್ನು ಸಕ್ರಿಯಗೊಳಿಸಿರುವ ಡಾನ್ ದಾವೂದ್ ಇಬ್ರಾಹಿಂ ಗ್ಯಾಂಗ್, ಭಾರತದಲ್ಲಿ ಭೀಕರ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿತ್ತು ಎಂಬ ಆಘಾತಕಾರಿ ವಿಷಯವನ್ನು ಗುಪ್ತಚರ ಮೂಲಗಳು ಬಹಿರಂಗಪಡಿಸಿವೆ. ದೆಹಲಿ ಪೊಲೀಸರು ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಿಂದಾಗಿ ಈ ಭೀಕರ ಉಗ್ರ ಸಂಚು ಸಫಲವಾಗುವ ಮುನ್ನವೇ ಹಳಿತಪ್ಪಿದೆ.
ರಣವೀರ್ ಸಿಂಗ್ ನಟನೆಯ, ಎರಡು ಭಾಗಗಳ ಬ್ಲಾಕ್‌ಬಸ್ಟರ್ ಸಿನಿಮಾ ಧುರಂಧರ್ ನಲ್ಲಿ ಬರುವ ‘ಬಡೇ ಸಾಹೇಬ್’ ಎಂಬ ಪಾತ್ರವು ದಾವೂದ್ ಇಬ್ರಾಹಿಂನನ್ನೇ ಹೋಲುತ್ತದೆ. ಚಿತ್ರದಲ್ಲಿ ಈ ಪಾತ್ರವನ್ನು ಸಾವು-ಬದುಕಿನ ನಡುವೆ ಹೋರಾಡುತ್ತಿರುವಂತೆ ತೋರಿಸಲಾಗಿದೆ. ಈ ದೃಶ್ಯದಿಂದಾಗಿ ಜಾಗತಿಕ ಮಟ್ಟದಲ್ಲಿ ದಾವೂದ್ ಇಬ್ರಾಹಿಂ ಇನ್ನು ಬದುಕುಳಿದಿಲ್ಲ ಅಥವಾ ಆತ ದುರ್ಬಲನಾಗಿದ್ದಾನೆ ಎಂಬ ಚರ್ಚೆ ಆರಂಭವಾಗಿತ್ತು. ಇದೇ ಕಾರಣಕ್ಕೆ ತಾನು ಇನ್ನೂ ಜೀವಂತವಾಗಿದ್ದೇನೆ ಮತ್ತು ಪ್ರಭಾವಶಾಲಿಯಾಗಿದ್ದೇನೆ ಎಂದು ಜಗತ್ತಿಗೆ ಸಾಬೀತುಪಡಿಸಲು ದಾವೂದ್ ಗ್ಯಾಂಗ್ ಸರಣಿ ದಾಳಿಗಳಿಗೆ ಹಪಹಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.

ಭೂಗತ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಧೂಳೀಪಟವಾಗುತ್ತಿರುವ ತನ್ನ ವರ್ಚಸ್ಸನ್ನು ಮರಳಿ ಪಡೆಯಲು ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಕುಖ್ಯಾತ ಐಎಸ್‌ಐ (ISI) ಬೇಹುಗಾರಿಕಾ ಸಂಸ್ಥೆಯ ಜೊತೆ ಕೈಜೋಡಿಸಿದ್ದಾನೆ. ಮುಂಬೈನ ಬೀದಿಗಳಿಂದ ಹೊಸ ಯುವಕರನ್ನು ಸೆಳೆದು ಹೊಸ ಉಗ್ರ ಪಡೆಯನ್ನು ಕಟ್ಟುವ ಜವಾಬ್ದಾರಿಯನ್ನು ಚೋಟಾ ಶಕೀಲ್ ಗ್ಯಾಂಗ್‌ಗೆ ವಹಿಸಲಾಗಿತ್ತು. ಈ ನೂತನ ರೌಡಿಗಳಿಗೆ ತರಬೇತಿ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ಹೊಣೆಯನ್ನು ISI ಹೊತ್ತುಕೊಂಡಿತ್ತು. ಇನ್ನು, ಭಾರತದಲ್ಲಿ ಭೀಕರ ಶೂಟೌಟ್ ನಡೆಸಲು ಕುಖ್ಯಾತ ಶೂಟರ್ ಮುನ್ನಾ ಜಿಂಗಾಡಾನನ್ನು (Munna Zingada) ಕಣಕ್ಕಿಳಿಸಲಾಗಿತ್ತು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಆಘಾತಕಾರಿ ವಿಷಯವೆಂದರೆ, ಈ ಕಾರ್ಯಾಚರಣೆಗೆ ಆಯ್ಕೆಯಾದ ಹೊಸ ರೌಡಿಗಳಿಗೆ ಇದರ ಹಿಂದಿನ ಅಸಲಿ ಕಾರಣವನ್ನೇ ತಿಳಿಸಿರಲಿಲ್ಲ. ಮುಂಬೈನ ಬಾಂದ್ರಾ ಗರೀಬ್ ನಗರದಲ್ಲಿದ್ದ ಅಕ್ರಮ ಮಸೀದಿಯೊಂದರ ಮೇಲಿನ ಬುಲ್ಡೋಜರ್ ಕ್ರಮವನ್ನು ಮುಂದಿಟ್ಟುಕೊಂಡು, ಯುವಕರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅವರನ್ನು ಈ ದೇಶದ್ರೋಹಿ ಕೃತ್ಯಕ್ಕೆ ಬಳಸಿಕೊಳ್ಳಲು ಡಿ-ಕಂಪನಿ ಮಾಸ್ಟರ್ ಪ್ಲಾನ್ ರೂಪಿಸಿತ್ತು. ಭಾರತದ ಪ್ರಭಾವಿ ರಾಜಕಾರಣಿ ಅಥವಾ ವಿವಿಐಪಿಯೊಬ್ಬರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು.
ಆದರೆ, ಭಾರತೀಯ ತನಿಖಾ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಸಕಾಲದಲ್ಲಿ ದಾಳಿ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸುವ ಮೂಲಕ ಮುಂಬೈ ಅಂಡರ್‌ವರ್ಲ್ಡ್ ಮತ್ತು ಐಎಸ್‌ಐ ಮೈತ್ರಿಯ ಭೀಕರ ಸಂಚನ್ನು ವಿಫಲಗೊಳಿಸಿದ್ದಾರೆ.