ತಿರುವನಂತಪುರಂ: ಒಂದು ವರ್ಷದ ಹಸುಗೂಸನ್ನು ದೈಹಿಕವಾಗಿ ಹಿಂಸಿಸಿ ಕೊಲೆ ಮಾಡಿರುವ ಘೋರ ಘಟನೆಯೊಂದು ಕೇರಳದ ನೆಡುಮಂಗಾಡ್ ಬಳಿಯ ಕರಿಕುಳಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ಮಗುವನ್ನು ಅರ್ಶಿತ್ (1) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಅಖಿಲಾ ಮತ್ತು ಆಕೆಯ ಲಿವ್-ಇನ್ ಪಾರ್ಟ್‌ನರ್ ಆಶ್ಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಆರೋಪಿ ಆಶ್ಕರ್‌ನನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಕರಿಕುಳಿಯ ಆತನ ಬಾಡಿಗೆ ಮನೆಯ ಬಳಿಗೆ ಕರೆತಂದಾಗ ಉದ್ರಿಕ್ತ ಸ್ಥಳೀಯರು ಆತನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಮೇ 29ರ ಶುಕ್ರವಾರದಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದ ಮಗು ಸಂಜೆ 4:30ರ ಸುಮಾರಿಗೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಯಿತು ಎಂದು ಆಶ್ಕರ್ ಮತ್ತು ಅಖಿಲಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಆರಂಭದಲ್ಲಿ ಇಬ್ಬರ ಹೇಳಿಕೆಯಂತೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮರಣೋತ್ತರ ಪರೀಕ್ಷೆಯ (Autopsy) ವರದಿ ಬರುತ್ತಿದ್ದಂತೆ ಮಗುವಿನ ಸಾವಿಗೆ ತೀವ್ರವಾದ ದೈಹಿಕ ಹಲ್ಲೆಯೇ ಕಾರಣ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಸಿಗರೇಟ್ ಬರೆ, ಮುರಿದಿದ್ದ ಕೈಗಳು
ಕೊಲೆಯಾದ ಮಗು ಅರ್ಶಿತ್‌ನ ತಂದೆ ಅಖಿಲ್ ಅವರು ಮಗು ಜನಿಸುವ ಮುನ್ನವೇ ಮೃತಪಟ್ಟಿದ್ದರು. ಮಗುವಿನ ತಾತ ಅನಿಲ್ ಮಾತನಾಡಿ, “ಮಗುವಿನ ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯಗಳು ಹಾಗೂ ತೀವ್ರ ಹಲ್ಲೆಯ ಕಲೆಗಳಿದ್ದವು. ಕಳೆದ ಮೂರು ತಿಂಗಳಿನಿಂದ ಮಗುವನ್ನು ನಮ್ಮ ಸುಪರ್ದಿಗೆ ನೀಡುವಂತೆ ಕೇಳುತ್ತಿದ್ದರೂ ಅವರು ನಿರಾಕರಿಸಿದ್ದರು” ಎಂದು ಕಣ್ಣೀರಿಟ್ಟಿದ್ದಾರೆ. ಮಗು ಸಾವನ್ನಪ್ಪಿದ ಸಮಯದಲ್ಲಿ ತಾಯಿ ಅಖಿಲಾ ತಮಿಳುನಾಡಿಗೆ ನೃತ್ಯ ಕಾರ್ಯಕ್ರಮಕ್ಕೆ ಹೋಗಿದ್ದು, ಆಶ್ಕರ್ ಮಗುವನ್ನು ಕ್ರೂರವಾಗಿ ಹಿಂಸಿಸಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಎರಡು ವಾರಗಳ ಹಿಂದೆ ಮಗುವಿನ ಎರಡೂ ಕೈಗಳು ಮುರಿದಿರುವುದನ್ನು ಸ್ಥಳೀಯರು ಗಮನಿಸಿದಾಗ, ಮಗು ತುಂಟತನದಿಂದ ಬಿದ್ದಿದೆ ಎಂದು ಆಶ್ಕರ್ ಸುಳ್ಳು ಹೇಳಿದ್ದನು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
.

ಮಗುವಿನ ಅಜ್ಜಿ (ತಾಯಿಯ ತಾಯಿ) ರೀನಾ ಅವರು ಈ ಹಿಂದೆಯೇ ಮಗುವಿನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. “ಮಗು ನನ್ನ ಬಳಿ ಇದ್ದಾಗ ಆರೋಗ್ಯವಾಗಿತ್ತು. ಅಖಿಲಾ ಕರೆದುಕೊಂಡು ಹೋದ ಕೆಲವೇ ದಿನಗಳಲ್ಲಿ ಮಗುವಿನ ಕೈ ಮುರಿದಿರುವ ಫೋಟೋವನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದಳು. ಈ ಬಗ್ಗೆ ನಾನು ಚೈಲ್ಡ್‌ಲೈನ್ (ಮಕ್ಕಳ ಸಹಾಯವಾಣಿ) ಮತ್ತು ಪೊಲೀಸ್ ಉನ್ನತಾಧಿಕಾರಿಗಳಿಗೆ (DySP) ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮಗುವನ್ನು ತಾಯಿಯ ಜೊತೆಯೇ ಕಳುಹಿಸಬೇಕು ಎಂದು ಪೊಲೀಸರು ಬೇಜವಾಬ್ದಾರಿತನ ತೋರಿದರು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲ ಪತ್ನಿಗೂ ಕೊಟ್ಟಿದ್ದ ಭೀಕರ ಹಿಂಸೆ
ಆರೋಪಿ ಆಶ್ಕರ್ ಹಿನ್ನೆಲೆ ತಡಕಾಡಿದಾಗ ಆತ ಕ್ರಿಮಿನಲ್ ಪ್ರವೃತ್ತಿಯವನೆಂಬುದು ಬಯಲಾಗಿದೆ. ಈತ ಈಗಾಗಲೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಕಾನೂನಾತ್ಮಕವಾಗಿ ವಿಚ್ಛೇದನ ನೀಡಿರಲಿಲ್ಲ. ಆಶ್ಕರ್‌ನ ಮೊದಲ ಅತ್ತೆ ಮಾತನಾಡಿ, “ಆಶ್ಕರ್ ತನ್ನ ತಾಯಿ ಮತ್ತು ಸಹೋದರಿಯ ಜೊತೆ ಸೇರಿ ನನ್ನ ಮಗಳ ತಲೆಯನ್ನು ಬಾತ್ ರೂಂ ಗೋಡೆಗೆ ಜಜ್ಜಿ ಪ್ರಜ್ಞೆ ತಪ್ಪಿಸುತ್ತಿದ್ದನು. ಆತನ ಕ್ರೌರ್ಯ ತಾಳಲಾರದೆ ಮಗಳು ದೂರವಾಗಿದ್ದಳು” ಎಂದು ಆಶ್ಕರ್‌ನ ಹಳೇ ಮುಖವಾಡವನ್ನು ಬಿಚ್ಚಿಟ್ಟಿದ್ದಾರೆ.
ಭಾನುವಾರ ನೆಡುಮಂಗಾಡ್ ಪೊಲೀಸರು ಆಶ್ಕರ್‌ನನ್ನು ಮಹಜರು ನಡೆಸಲು ಕರೆತಂದಾಗ ಸ್ಥಳೀಯ ಮಹಿಳೆಯರು ಮತ್ತು ನಿವಾಸಿಗಳು ಆತನನ್ನು ಹಿಡಿದು ತಳಿಸಲು ಮುಗಿಬಿದ್ದರು. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತಳ್ಳಾಟ-ನೂಕಾಟ ನಡೆದಿದ್ದರಿಂದ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿ ಆರೋಪಿಯನ್ನು ತಕ್ಷಣವೇ ಜೀಪಿಗೆ ಹತ್ತಿಸಿ ಪೊಲೀಸರು ವಾಪಸ್ ಕರೆದೊಯ್ದಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ಕಠಿಣ ವಿಚಾರಣೆಗೆ ಒಳಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.