ಕಟುಕನ ಕತ್ತಿಯಿಂದ ಪಾರಾಗಿ ಮೃಗಾಲಯ ಸೇರಿದ ʻಡೊನಾಲ್ಡ್‌ ಟ್ರಂಪ್!ʼ

ಢಾಕಾ: ಅದು ಕೇವಲ ನಾಲ್ಕು ವರ್ಷದ ಕೋಣ. ಆದರೆ ಅದರ ಲಕ್ ಮಾತ್ರ ಅಮೆರಿಕ ಅಧ್ಯಕ್ಷರಷ್ಟೇ ಪವರ್‌ಫುಲ್ ಆಗಿತ್ತು! ಬಕ್ರೀದ್ ಹಬ್ಬದ ಬಿರಿಯಾನಿಗೆ ಮಸಾಲೆಯಾಗಿ ಹೋಗಬೇಕಾಗಿದ್ದ ಅಪರೂಪದ ಆಲ್ಬಿನೋ ತಳಿಯ ಕೋಣವೊಂದು ಕೊನೆ ಕ್ಷಣದಲ್ಲಿ ಯಮಲೋಕದ ಗೇಟಿನಿಂದ ವಾಪಸ್ ಬಂದು ಮೃಗಾಲಯದ ರಾಜ ಅತಿಥಿಯಾಗಿ ಸೇರಿದ ರೋಚಕ ಮತ್ತು ಭಾವನಾತ್ಮಕ ಕಥೆಯೊಂದು ಬಾಂಗ್ಲಾದೇಶದಲ್ಲಿ ನಡೆದಿದೆ. ಕೇವಲ ವಿಚಿತ್ರ ಕೂದಲಿನ ಶೈಲಿಯಿಂದಾಗಿ ಇಡೀ ಇಂಟರ್ನೆಟ್ ಜಗತ್ತನ್ನು ಆಳಿದ್ದ ಈ ಕೋಣ, ಈಗ ಸಾವು ಗೆದ್ದು ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿದೆ.

Viral 'Donald Trump' buffalo spared from Eid sacrifice in Bangladesh;  here's why - BusinessToday

ಎಲ್ಲವೂ ಆರಂಭವಾಗಿದ್ದು ಹತ್ತು ತಿಂಗಳ ಹಿಂದೆ. ಬಾಂಗ್ಲಾದೇಶದ ನಾರಾಯಣಗಂಜ್‌ನ ರಬೆಯಾ ಆಗ್ರೋ ಫಾರ್ಮ್‌ನ ಮಾಲೀಕ ಜಿಯಾವುದ್ದೀನ್ ಮೈರಾಧಾ ಎಂಬುವವರು ಮಾರುಕಟ್ಟೆಯಿಂದ ಒಂದು ವಿಚಿತ್ರ ಕೋಣವನ್ನು ತಂದಿದ್ದರು. ಕಪ್ಪಗಿರಬೇಕಾದ ಕೋಣ ತಿಳಿ ಗುಲಾಬಿ ಬಣ್ಣದಲ್ಲಿ, ಬೆಳ್ಳನೆಯ ಮುಂಗೂದಲಿನೊಂದಿಗೆ ಮಿಂಚುತ್ತಿತ್ತು. ಮಾಲೀಕನ ತಮ್ಮ ಆ ಕೋಣದ ಹೇರ್ ಸ್ಟೈಲ್ ನೋಡಿ, “ಅರೇ, ಇದು ನಮ್ಮ ಡೊನಾಲ್ಡ್ ಟ್ರಂಪ್ ತರಹ ಇದೆಯಲ್ಲ!” ಎಂದು ತಮಾಷೆಗೆ ಹೆಸರಿಟ್ಟು ಸೋಶಿಯಲ್ ಮೀಡಿಯಾಕ್ಕೆ ವಿಡಿಯೋ ಹಾಕಿದ್ದೇ ತಡ, ರಾತ್ರೋರಾತ್ರಿ ಆ ಕೋಣ ಗ್ಲೋಬಲ್ ಸೆಲೆಬ್ರಿಟಿಯಾಗಿ ಬಿಟ್ಟಿತು. ಇದನ್ನು ನೋಡಲೆಂದೇ ಫಾರ್ಮ್‌ಗೆ ಜನ ಮುಗಿಬಿದ್ದರು.

ಆದರೆ, ಸೆಲೆಬ್ರಿಟಿ ಆದರೂ ವಿಧಿ ಬರಹ ಬೇರೆಯೇ ಇತ್ತು. ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದಂತೆ ಸುಮಾರು 700 ಕೆಜಿ ತೂಕವಿದ್ದ ಈ ‘ಟ್ರಂಪ್’ ಕೋಣವನ್ನು ಬಿರಿಯಾನಿ ಪ್ರಿಯರೊಬ್ಬರು ಸುಮಾರು 3 ಲಕ್ಷ ರೂಪಾಯಿಗೆ ಖರೀದಿಸಿದ್ದರು. “ಅಯ್ಯೋ, ಅಮೆರಿಕದ ಮಾಜಿ ಅಧ್ಯಕ್ಷರ ಹೆಸರಿರೋ ಕೋಣ ಹೀಗೆ ಹಬ್ಬಕ್ಕೆ ಬಲಿಯಾಗಬೇಕೇ?” ಎಂದು ಪ್ರಾಣಿ ಪ್ರಿಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿ ಪೋಸ್ಟ್‌ಗಳನ್ನು ಹಾಕತೊಡಗಿದರು. ಟ್ರಂಪ್ ಕೋಣದ ಕೌಂಟ್‌ಡೌನ್ ಶುರುವಾಗಿತ್ತು, ಎಲ್ಲರ ಹೃದಯದಲ್ಲೂ ಕೊಂಚ ದಿಗಿಲು ಮನೆ ಮಾಡಿತ್ತು.

ಆದರೆ ಕ್ಲೈಮ್ಯಾಕ್ಸ್‌ನಲ್ಲಿ ದೇವರೆ ಬೇರೆ ಸ್ಕ್ರಿಪ್ಟ್ ಬರೆದಿದ್ದ! ಅದರ ಅಪರೂಪದ ಆಲ್ಬಿನೋ ಸೌಂದರ್ಯ ಮತ್ತು ಅದರ ಮೇಲಿನ ಜನರ ಪ್ರೀತಿಯನ್ನು ಕಂಡು ಮನಕರಗಿದ ಖರೀದಿದಾರ ಮತ್ತು ಅಧಿಕಾರಿಗಳು ಜಂಟಿ ನಿರ್ಧಾರ ಕೈಗೊಂಡರು. ಅಂತಿಮವಾಗಿ ಟ್ರಂಪ್ ಕೋಣವನ್ನು ಬಲಿ ಕೊಡದಿರಲು ತೀರ್ಮಾನಿಸಿ, ಗೌರವಪೂರ್ವಕವಾಗಿ ಬಾಂಗ್ಲಾದೇಶದ ರಾಷ್ಟ್ರೀಯ ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಲಾಯಿತು. ಕಟುಕನ ಕತ್ತಿಗೆ ಸಿಗಬೇಕಾಗಿದ್ದ ಕೋಣ ಈಗ ಮೃಗಾಲಯದಲ್ಲಿ ಹಾಯಾಗಿ ಹುಲ್ಲು ಮೇಯುತ್ತಾ ಪ್ರವಾಸಿಗರಿಗೆ ಪೋಸ್ ನೀಡುತ್ತಿದೆ. “ಹೆಸರಲ್ಲೇನಿದೆ ಬಿಡಿ, ಲಕ್ ಇರಬೇಕು” ಎಂದು ನೆಟ್ಟಿಗರು ಈ ಜೀವದಾನದ ಸುಖಾಂತ್ಯಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

error: Content is protected !!