ಜಾಗ ಅತಿಕ್ರಮಣ- ಕೋಟ್ಯಾನ್ ಹಸ್ತಕ್ಷೇಪದ ಆರೋಪ: ‘ಸೆಲ್ಫ್ ಡಿಫೆನ್ಸ್’ ಸಮರ ಸಾರಿದ ರಾಬರ್ಟ್‌ ರೊಸಾರಿಯೋ!

ಮೂಡುಬಿದಿರೆ: ಮುಂಬೈನಲ್ಲಿ ನೆಲೆಸಿರುವ ಕರಾವಳಿ ಮೂಲದ ಅನಿವಾಸಿ ಭಾರತೀಯರೊಬ್ಬರ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಸ್ಥಳೀಯ ಪ್ರಭಾವಿಗಳು ಅಕ್ರಮವಾಗಿ ಅತಿಕ್ರಮಣ ಮಾಡುತ್ತಿದ್ದು, ಇದಕ್ಕೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ, ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಮುಲ್ಕಿ ಪೊಲೀಸರು ದೂರು ಸ್ವೀಕರಿಸಲು ಹಾಗೂ ಕ್ರಮ ಕೈಗೊಳ್ಳಲು ನಿಷ್ಕ್ರಿಯರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೋ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸಂತ್ರಸ್ತ ರಾಕೇಶ್ ಮೆಲ್ವಿನ್ ಡಿಸೋಜಾ ಅವರೊಂದಿಗೆ ಮಾತನಾಡಿದ ರಾಬರ್ಟ್‌ ರೊಸಾರಿಯೋ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಮುಲ್ಕಿ ಪೊಲೀಸ್ ಠಾಣೆಗೆ ಒಳಪಡುವ ಪಕ್ಷಿಕೆರೆ ಕೆಮ್ಮ್ರಾಲ್ ಗ್ರಾಮದಲ್ಲಿ ರಾಕೇಶ್ ಮೆಲ್ವಿನ್ ಡಿಸೋಜಾ ಅವರ ತಾಯಿ ಬೆನಡಿಕ್ಟಾ ಡಿಸೋಜಾ ಹೆಸರಿನಲ್ಲಿ 52 ಸೆಂಟ್ಸ್ ಜಾಗವಿದೆ. ಈ ಜಾಗದ ಸುತ್ತಲೂ ಕಾಂಪೌಂಡ್ ಗೋಡೆ ಕಟ್ಟಿ, ಗೇಟ್ ಹಾಕಿ ಭದ್ರಪಡಿಸಲಾಗಿತ್ತು. ರಾಕೇಶ್ ಅವರ ಕುಟುಂಬ ಮುಂಬೈನಲ್ಲಿ ವಾಸವಾಗಿರುವುದನ್ನು ಬಂಡವಾಳ ಮಾಡಿಕೊಂಡ ನೆರೆಮನೆಯ ಶಾರದಾ ಶೆಟ್ಟಿಗಾರ್ ಮತ್ತು ಅವರ ಕುಟುಂಬಸ್ಥರು ಈ ಖಾಲಿ ಪ್ಲಾಟ್ ಮೇಲೆ ಕಣ್ಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಬೀಗ ಹಾಕಿದ್ದ ಗೇಟ್ ಮುರಿದು ಒಳನುಗ್ಗಿರುವ ಅಕ್ರಮಕೋರರು, ಅಲ್ಲಿ ಅಕ್ರಮ ಕಟ್ಟಡ ಕಾಮಗಾರಿ ಆರಂಭಿಸಿದ್ದಾರೆ. ಈ ವಿಷಯ ತಿಳಿದು ಮುಂಬೈನಿಂದ ಧಾವಿಸಿ ಬಂದ ರಾಕೇಶ್ ಅವರು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ದೂರು ಕೊಟ್ಟರೂ ಯಾವುದೇ ರಶೀದಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರೊಬ್ಬರು ಕಾನೂನು ಬಾಹಿರವಾಗಿ ಹಸ್ತಕ್ಷೇಪ ನಡೆಸಿ, ಪೊಲೀಸರು ಕರ್ತವ್ಯ ನಿರ್ವಹಿಸದಂತೆ ಒತ್ತಡ ಹೇರುತ್ತಿರುವುದು ಅತ್ಯಂತ ಅಕ್ಷಮ್ಯ ಅಪರಾಧ ಎಂದ ರಾಬರ್ಟ್ ರೊಸಾರಿಯೋ, ಈ ಇಡೀ ಪ್ರಕರಣದ ಹಿಂದೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹಸ್ತಕ್ಷೇಪವಿದೆ ಎಂದು ಆರೋಪಿಸಿದರು. ಶಾಸಕರ ಒತ್ತಡ ಇರುವುದರಿಂದಲೇ ಮುಲ್ಕಿ ಪೊಲೀಸರು, ಮಂಗಳೂರು ಡಿಸಿಪಿ ಹಾಗೂ ಕರಾವಳಿ ಪೊಲೀಸ್ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. BNSS ಸೆಕ್ಷನ್ 163ರ ಅಡಿಯಲ್ಲಿ ಕ್ರಿಮಿನಲ್ ಟ್ರೆಸ್‌ಪಾಸ್ ತಡೆಯಲು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಎದುರಾಳಿಗಳು ಗುಂಡಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ರೊಸಾರಿಯೋ ದೂರಿದ್ದಾರೆ.

ಭೂಮಿಯ ನಿಖರ ಅಳತೆ ಮಾಡಲು ನಿಗದಿಪಡಿಸಲಾಗಿದ್ದ ಸರ್ಕಾರಿ ಸರ್ವೇ ಕಾರ್ಯಕ್ಕೂ ಎದುರಾಳಿಗಳು ಅಡ್ಡಿಪಡಿಸಿದ್ದಾರೆ. ಪೊಲೀಸರ ರಕ್ಷಣೆಗಾಗಿ ₹5,029 ಶುಲ್ಕ ಪಾವತಿಸಿ ರಶೀದಿ ಪಡೆದಿದ್ದರೂ, ಸ್ಥಳದಲ್ಲಿದ್ದ ಎಎಸ್‌ಐ ರೇವಣ್ಣ ಎಂಬುವವರು “ಸರ್ವೇಯರ್ ಮಾತ್ರ ಟೇಪ್ ಹಿಡಿಯಬೇಕು, ಬೇರೆ ಯಾರೂ ಮುಟ್ಟುವಂತಿಲ್ಲ” ಎಂಬ ವಿಚಿತ್ರ ಆದೇಶ ಹೊರಡಿಸಿ, ಸರ್ವೇ ಕಾರ್ಯ ಅರ್ಧಕ್ಕೆ ನಿಲ್ಲುವಂತೆ ಮಾಡಿದ್ದಾರೆ. ಈ ಮೂಲಕ ಪೊಲೀಸರೇ ಪರೋಕ್ಷವಾಗಿ ಅಕ್ರಮ ಒತ್ತುವರಿಕೋರರಿಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

‘ಸೆಲ್ಫ್ ಡಿಫೆನ್ಸ್’ ಒಂದೇ ನಮ್ಮ ಮುಂದಿರುವ ಹಾದಿ
ಪೊಲೀಸ್ ಇಲಾಖೆ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಸೋತಿರುವುದರಿಂದ, ಇನ್ನು ಮುಂದೆ ಬಿಎನ್‌ಎಸ್ (BNS) ಕೌನ್ಸಿಲ್ ಸೆಕ್ಷನ್ 34 ರಿಂದ 44 ರವರೆಗೆ ನಾಗರಿಕರಿಗೆ ನೀಡಿರುವ ʻರೈಟ್ ಆಫ್ ಪ್ರೈವೇಟ್ ಡಿಫೆನ್ಸ್’ (ಆತ್ಮರಕ್ಷಣೆ ಹಾಗೂ ಆಸ್ತಿ ರಕ್ಷಣೆಯ ಹಕ್ಕು) ಅಡಿಯಲ್ಲಿ ಒತ್ತುವರಿಕೋರರನ್ನು ಎದುರಿಸಲು ಸಂತ್ರಸ್ತರು ನಿರ್ಧರಿಸಿದ್ದಾರೆ. ತಮ್ಮ ಪ್ರಾಣ ಹಾಗೂ ಆಸ್ತಿ ರಕ್ಷಣೆಗಾಗಿ ಎದುರಾಳಿಗಳನ್ನು ಹೊಡೆದು ಉರುಳಿಸುವ ಹಕ್ಕು ಕಾನೂನಿನಲ್ಲಿದ್ದು, ರಾಕೇಶ್ ಅವರಿಗೆ ಈ ಹೋರಾಟದಲ್ಲಿ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ರಾಬರ್ಟ್ ರೊಸಾರಿಯೋ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ರಾಕೇಶ್ ಮೆಲ್ವಿನ್ ಡಿಸೋಜಾ ಹಾಗೂ ರಾಜನ್ ಡಿಕೋಸ್ಟಾ ಉಪಸ್ಥಿತರಿದ್ದರು.

error: Content is protected !!