ಮಂಗಳೂರು: ಮಂಗಳೂರಿನ ಬಿಜೈ ಆನೆಗುಂಡಿ ಬ್ರಿಜ್ ಕಾಲುವೆ ಹಾಗೂ ಕೊಡಿಯಾಲ್‌ಗುತ್ತು ಬ್ರಿಜ್ ಕಾಲುವೆಗಳಲ್ಲಿ ಮಲಿನ ನೀರು ಮತ್ತು ಒಳಚರಂಡಿ ತ್ಯಾಜ್ಯ ನಿರಂತರವಾಗಿ ಹರಿದು ಬಂದು ನಿಲ್ಲುತ್ತಿದ್ದು, ತೀವ್ರ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ನಿಯೋಗವು ಈ ಭಾಗಗಳಿಗೆ ಖುದ್ದಾಗಿ ಭೇಟಿ ನೀಡಿ, KUIDFC ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಸ್ಥಳ ಪರಿವೀಕ್ಷಣೆ ನಡೆಸಿತು.

ಬಳಿಕ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಂಗಳೂರು ಮತ್ತು ಉಡುಪಿ ಅವಳಿ ನಗರಗಳ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ನಗರದ ಬಾಕಿ ಇರುವ ಪ್ರಮುಖ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ₹150 ಕೋಟಿ ಹೆಚ್ಚುವರಿ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.





ನಗರದಾದ್ಯಂತ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಅರ್ಧಂಬರ್ಧ ಕಾಮಗಾರಿಗಳ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಅಧ್ಯಕ್ಷ ಟಿ. ರಘುಮೂರ್ತಿ, “ನಮ್ಮ ಸಾರ್ವಜನಿಕ ಉದ್ದೇಶಗಳ ಸಮಿತಿಯು ಪ್ರತಿ ಬುಧವಾರ ನಿಯಮಿತವಾಗಿ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತಿದೆ. ಕೇವಲ ಎಸಿ ಕಚೇರಿಗಳ ಸಭೆಗಳಿಗೆ ಸೀಮಿತವಾಗದೆ, ನಾವೇ ಖುದ್ದಾಗಿ ಕಣಕ್ಕಿಳಿದು ಸ್ಥಳ ತಪಾಸಣೆ ನಡೆಸುತ್ತಿದ್ದೇವೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಶೀಘ್ರದಲ್ಲೇ ನಿವಾರಿಸಿ, ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ನಮ್ಮ ಮೊದಲ ಆದ್ಯತೆಯಾಗಿದೆ” ಎಂದರು. ಕೆಲವೆಡೆ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲಸಗಳು ವಿಳಂಬವಾಗಿದ್ದು, ಅವುಗಳನ್ನು ಸ್ಥಳದಲ್ಲೇ ಬಗೆಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ನೆರೆ ಜಿಲ್ಲೆ ಉಡುಪಿಯ ಪ್ರಗತಿಯ ಕುರಿತು ಮಾಹಿತಿ ನೀಡಿದ ಅವರು, ಉಡುಪಿ ನಗರ ಪ್ರದೇಶದಲ್ಲಿ ಈಗಾಗಲೇ ಸುಮಾರು ಶೇ. 90 ರಷ್ಟು ಮೂಲಸೌಕರ್ಯ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಬಾಕಿ ಇರುವ ಕೆಲವು ಪ್ರಮುಖ ಸಿವಿಲ್ ಹಾಗೂ ಇಂಜಿನಿಯರಿಂಗ್ ಕೆಲಸಗಳನ್ನು ಮುಂಬರುವ ಆಗಸ್ಟ್ 9ರ ಒಳಗಾಗಿ ಸಂಪೂರ್ಣವಾಗಿ ಮುಗಿಸಲು ಗಡುವು ವಿಧಿಸಲಾಗಿದೆ. ಇನ್ನುಳಿದ ಅತ್ಯಂತ ಸಣ್ಣಪುಟ್ಟ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಮುಂದಿನ ವರ್ಷದ ಜನವರಿ 27ರ ಒಳಗೆ ಇತ್ಯರ್ಥಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆಗಳ ವೇಗವರ್ಧನೆಗಾಗಿ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಉನ್ನತ ಅಧಿಕಾರಿಗಳೊಂದಿಗೆ ಸಮಗ್ರ ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ. ಸ್ಥಳೀಯವಾಗಿ ಎದುರಾಗಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಈಗಾಗಲೇ ಕೆಲವು ಪ್ರಾಂತ್ಯಗಳಲ್ಲಿ ಸುಮಾರು ₹9 ಕೋಟಿ ವೆಚ್ಚದ ಹೊಸ ಟೆಂಡರ್‌ಗಳನ್ನು ಕರೆಯಲಾಗಿದೆ. ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ನಿಗಮದಿಂದ ಮಧ್ಯಂತರ ವರದಿಗಳನ್ನು ತರಿಸಿಕೊಂಡು ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು..

ಅಧಿವೇಶನದಲ್ಲಿ ವಿಷಯ ಪ್ರಸ್ತಾಪ: ಐವನ್ ಡಿಸೋಜಾ
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜಾ ಮಾತನಾಡಿ, “ಬಿಜೈ ಆನೆಗುಂಡಿ, ಕೊಡಿಯಾಲ್‌ಗುತ್ತು ಮಾತ್ರವಲ್ಲದೆ ನಗರದ ವಿವಿಧ ಭಾಗಗಳಲ್ಲಿ ಇಂಥದ್ದೇ ಸಮಸ್ಯೆಗಳಿವೆ. ಖಂಡಿಗೆಯಲ್ಲೂ ನದಿ ನೀರು ಮಲಿನಗೊಂಡಿದೆ. ನಗರದ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ, ಮಲಿನ ನೀರಿನ ಸಮಸ್ಯೆಗಳನ್ನು ನಿವಾರಿಸಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಈ ಪ್ರಸ್ತುತ ಸಮಸ್ಯೆಗಳನ್ನು ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಲಾಗುವುದು. ಪಕ್ಷಭೇದ ಮರೆತು ಎಲ್ಲರೂ ಜೊತೆಯಾಗಿ ನಗರದ ಸುಂದರೀಕರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.

ಪತ್ರಿಕಾಗೋಷ್ಠಿ ಹಾಗೂ ಸ್ಥಳ ಪರಿಶೀಲನೆಯ ವೇಳೆ ಸಮಿತಿಯ ಸದಸ್ಯರಾದ ಜೆ.ಕೆ. ವೆಂಕಟಶಿವ ರೆಡ್ಡಿ, ಎಂ. ಕೃಷ್ಣಪ್ಪ, ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಎಸ್. ಮುನಿರಾಜು, ಟಿ.ಎನ್. ಜವರೇಗೌಡ, ಕಿಶೋರ್ ಕುಮಾರ್ ಪುತ್ತೂರು, ಹರೀಶ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಪಾಲಿಕೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.