
ಬೆಂಗಳೂರು: ಹಳೆ ಮಾಲೀಕರ ಮನೆಗೆ ಮಾಜಿ ಚಾಲಕನೋರ್ವ ಡುಪ್ಲಿಕೇಟ್ ಕೀ ಬಳಸಿ, 8 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 146 ಗ್ರಾಂ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಂಗಳೂರಿನನಾಗರಭಾವಿಯಲ್ಲಿ ನಡೆದಿದೆ.

ಪ್ರಕಾಶ್ ಎ. ಎಂಬುವವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಯೋಗೇಶ್ ಎಂಬಾತ ಸುಮಾರು ಒಂದು ವರ್ಷ ಅವರ ವೈಯಕ್ತಿಕ ಕಾರು ಚಾಲಕರಾಗಿ ಕೆಲಸ ಮಾಡಿ, ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಎನ್ನಲಾಗಿದೆ.

ಏಪ್ರಿಲ್ 25ರಿಂದ ಕುಟುಂಬದವರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಹೀಗಿದ್ದರೂ ಮನೆಯ ಬಾಗಿಲು ಅಥವಾ ಕಿಡಕಿಗಳು ಸೇರಿ ಎಲ್ಲವೂ ಯಥಾಸ್ಥಿತಿಯಲ್ಲಿರುತಿತ್ತು. ಈ ನಡುವೆ ಮೇ 23ರಂದು ಸಂಜೆ ಸುಮಾರು 4.30ರ ವೇಳೆ ಪ್ರಕಾಶ್ ಅವರ ಪತ್ನಿ ಮತ್ತು ಕಿರಿಯ ಪುತ್ರಿ ದಂತ ಚಿಕಿತ್ಸೆಗೆ ತೆರಳಿದ್ದ ವೇಳೆ, ಮನೆಯಲ್ಲಿ ಒಬ್ಬಳೇ ಇದ್ದ ಹಿರಿಯ ಪುತ್ರಿಗೆ ಮಾಸ್ಟರ್ ಬೆಡ್‌ರೂಮ್ ಕಡೆಯಿಂದ ಶಬ್ದ ಕೇಳಿಸಿದೆ. ಹೀಗಾಗಿ ಅನುಮಾನಗೊಂಡು ಆಕೆ ಹೋಗಿ ನೋಡಿದಾಗ ಯೋಗೇಶ್ ಮನೆಯ ಮುಖ್ಯ ಬಾಗಿಲಿನ ಡುಪ್ಲಿಕೇಟ್ ಕೀ ಬಳಸಿ ಒಳನುಗ್ಗಿ, ಚಿನ್ನಾಭರಣಗಳಿದ್ದ ಡ್ರಾಯರ್ ತೆರೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಪ್ರಕಾಶ್ ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಯೋಗೇಶ್ ಹೇಳಿದ್ದಾನೆ. ಕುಟುಂಬದವರು ಮನೆಗೆ ಬಂದು ವಿಚಾರಿಸಿದಾಗ ಆತ ಮೌನವಾಗಿದ್ದ. ಆದರೆ ಪೊಲೀಸರಿಗೆ ಕರೆ ಮಾಡುವುದಾಗಿ ಪ್ರಕಾಶ್ ಹೇಳುತ್ತಿದ್ದಂತೆ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕುಟುಂಬದವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಯೋಗೇಶ್ ಡುಪ್ಲಿಕೇಟ್ ಕೀ ಬಳಸಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ದೃಶ್ಯಗಳು ಪತ್ತೆಯಾಗಿವೆ. ಕಳುವಾದ ಚಿನ್ನಾಭರಣಗಳಲ್ಲಿ 24 ಗ್ರಾಂ ಹಾರ, 6 ಗ್ರಾಂ ಉಂಗುರ, 24 ಗ್ರಾಂ ಬಳೆಗಳು, 12 ಗ್ರಾಂ ಚಿನ್ನದ ನಾಣ್ಯ, 16 ಗ್ರಾಂ ಸರ ಹಾಗೂ 64 ಗ್ರಾಂ ಮಾಂಗಲ್ಯ ಸರ ಸೇರಿವೆ. ಇದೀಗ ಆರೋಪಿ ಯೋಗೇಶ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.