ಕಾಸರಗೋಡು: ಗಡಿ ಜಿಲ್ಲೆ ಕಾಸರಗೋಡಿನ ಮಂಜೇಶ್ವರ ಮತ್ತು ಉಪ್ಪಳ ಭಾಗದಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಾಳಿಗೆ ತೂರಿರುವ ಗ್ಯಾಂಗ್‌ಸ್ಟರ್‌ಗಳ ಹಿಂಬಾಲಕರು, ಈಗ ನೇರವಾಗಿ ಖಾಕಿ ಪಡೆಯ ಮೇಲೆಯೇ ದಾಳಿ ಮಾಡಿದ್ದಾರೆ! ಹಳೇ ರೌಡಿಶೀಟರ್, ದಿವಂಗತ ಕಾಲಿಯಾ ರಫೀಕ್‌ನ ಮಗ, ಕಿಡ್ನ್ಯಾಪ್ ಕೇಸ್‌ನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸುಹೇಲ್ (29) ಎಂಬಾತನನ್ನು ಬಂಧಿಸಲು ಹೋದ ಪೊಲೀಸ್ ತಂಡದ ಮೇಲೆ ಆತನ ಕುಟುಂಬಸ್ಥರು ಮತ್ತು ಸ್ಥಳೀಯರು ಹಲ್ಲೆ ನಡೆಸಿ, ಪೊಲೀಸರ ಕಸ್ಟಡಿಯಿಂದಲೇ ಆರೋಪಿಯನ್ನು ಪಾರು ಮಾಡಿದ ಆಘಾತಕಾರಿ ಘಟನೆ ಮಣಿಮುಂಡದಲ್ಲಿ ನಡೆದಿದೆ!

ಕಾಞಂಗಾಡ್‌ನಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ಸ್ಕ್ವಾಡ್, ಸೋಮವಾರ ಮಧ್ಯಾಹ್ನ ಉಪ್ಪಳದ ಮಣಿಮುಂಡದಲ್ಲಿರುವ ಸುಹೇಲ್ ಮನೆಗೆ ಜಂಟಿ ದಾಳಿ ನಡೆಸಿತ್ತು. ಪೊಲೀಸರು ಆತನನ್ನು ವಶಕ್ಕೆ ಪಡೆದು ಜೀಪಿಗೆ ಹತ್ತಿಸಬೇಕು ಎನ್ನುವಷ್ಟರಲ್ಲಿ ಸುಹೇಲ್ ತಾಯಿ ದೊಡ್ಡದೊಂದು ಕತ್ತಿ ಹಿಡಿದು ಪೊಲೀಸರ ಮೇಲೆ ಅಟಕಾಯಿಸಿದ್ದಾಳೆ! ಇವಳಿಗೆ ಸಾಥ್ ನೀಡಿದ ಸುಹೇಲ್ ಹೆಂಡತಿ ಜೋರಾಗಿ ಕಿರುಚಾಡಿ ಇಡೀ ಗಲ್ಲಿಯನ್ನು ಒಟ್ಟುಗೂಡಿಸಿದ್ದಾಳೆ. ಕ್ಷಣಾರ್ಧದಲ್ಲಿ ಜಮಾಯಿಸಿದ ನೂರಾರು ಸ್ಥಳೀಯರು ಪೊಲೀಸರ ಮೇಲೆ ಮುಗಿಬಿದ್ದು, ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿಯನ್ನು ಬಿಡಿಸಿಕೊಂಡು ಪರಾರಿಯಾಗುವಂತೆ ಮಾಡಿದ್ದಾರೆ!

ಈ ದಿಢೀರ್ ದಾಳಿಯಿಂದಾಗಿ ಜಿಲ್ಲಾ ಪೊಲೀಸ್ ಕಮಾಂಡರ್ ಸ್ಕ್ವಾಡ್‌ನ ಸಿಬ್ಬಂದಿ ಸಜೀಶ್ ಮತ್ತು ಥಾಮಸ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲಾಖೆಯ ಮೇಲೆಯೇ ನಡೆದ ಈ ದಾಳಿಯಿಂದ ಸಿಡಿದೆದ್ದ ಕಾಸರಗೋಡು ಪೊಲೀಸರು, ಇಡೀ ಉಪ್ಪಳ ಭಾಗವನ್ನು ಸುತ್ತುವರೆದು ಕೆಲವೇ ಗಂಟೆಗಳಲ್ಲಿ ಆರೋಪಿ ಸುಹೇಲ್‌ನನ್ನು ಆತನ ಮನೆಯ ಸಮೀಪವೇ ಮತ್ತೆ ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಅಪರಾಧಿಗೆ ಸಹಕರಿಸಿದ ಸುಹೇಲ್ ತಾಯಿ ಹಾಗೂ ಹೆಂಡತಿ ಸೇರಿದಂತೆ ಇಡೀ ಗುಂಪಿನ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ರೌಡಿಶೀಟರ್ ಕಾಲಿಯಾ ರಫೀಕ್‌ನ ಇತಿಹಾಸ!
ಬಂಧಿತ ಸುಹೇಲ್ ಬೇರೆ ಯಾರೂ ಅಲ್ಲ, ಒಂದು ಕಾಲದಲ್ಲಿ ಇಡೀ ಕೇರಳ-ಕರ್ನಾಟಕ ಗಡಿ ಭಾಗವನ್ನು ಗನ್ ಕಲ್ಚರ್, ಸುಲಿಗೆ ಮತ್ತು ಕೊಲೆಗಳ ಮೂಲಕ ನಡುಗಿಸಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಕಾಲಿಯಾ ರಫೀಕ್‌ನ ಮಗ! 2017ರ ಫೆಬ್ರವರಿಯಲ್ಲಿ ಮಂಗಳೂರಿನ ಕೆ.ಸಿ ರೋಡ್ ಬಳಿ ಎದುರಾಳಿ ಗ್ಯಾಂಗ್ ಟಿಪ್ಪರ್ ಲಾರಿಯನ್ನು ಈತನ ಕಾರಿಗೆ ಢಿಕ್ಕಿ ಹೊಡೆಸಿ, ತಲವಾರಿನಿಂದ ಕೊಚ್ಚಿ ರಫೀಕ್‌ನನ್ನು ಹತ್ಯೆ ಮಾಡಿತ್ತು. ಕೊಲೆ, ಕೊಲೆಯತ್ನ, ಡ್ರಗ್ಸ್ ಸೇರಿದಂತೆ 30ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಹೊಂದಿದ್ದ ಕಾಲಿಯಾ ರಫೀಕ್‌ನ ಮಗ ಸುಹೇಲ್ ಕೂಡ ಈಗ ತಂದೆಯ ಹಾದಿಯಲ್ಲೇ ಸಾಗುತ್ತಿದ್ದು, ಕೇರಳ ಮತ್ತು ಕರ್ನಾಟಕದ ಹಲವು ಠಾಣೆಗಳಲ್ಲಿ ಈತನ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ.

ಗಡಿ ಭಾಗದಲ್ಲಿ ಪೊಲೀಸರ ಮೇಲೆಯೇ ಕೈ ಮಾಡುವ ಧೈರ್ಯ ಪ್ರದರ್ಶಿಸಿರುವ ಈ ಸಮಾಜವಿರೋಧಿ ಶಕ್ತಿಗಳ ವಿರುದ್ಧ ಕಾಸರಗೋಡು ಪೊಲೀಸರು ಈಗ ಸಿಡಿದೆದ್ದಿದ್ದಾರೆ. ಪೊಲೀಸರ ಮೇಲಿನ ಹಲ್ಲೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ದಾಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬ ಕ್ರಿಮಿನಲ್‌ನನ್ನೂ ಜೈಲಿಗೆ ತಳ್ಳಲು ಮಂಜೇಶ್ವರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶೂಟರ್‌ಗಳು ಮತ್ತು ಸುಲಿಗೆಕೋರರ ಅಡ್ಡೆಯಾಗಿದ್ದ ಉಪ್ಪಳದಲ್ಲಿ ಮತ್ತೆ ಇಂತಹ ರೌಡಿಸಂ ತಲೆ ಎತ್ತಿದರೆ ಜಾಗತಿಕ ಮಟ್ಟದ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಾಕಿ ಪಡೆ ವಾರ್ನಿಂಗ್ ನೀಡಿದೆ.
