ಕಂದಕಕ್ಕೆ ಉರುಳಿದ ಟೆಂಪೋ ಟ್ರಾವೆಲರ್; 13 ಮಂದಿ ಅಪಾಯದಿಂದ ಪಾರು

ಚಿಕ್ಕಮಗಳೂರು: ಟೆಂಪೋ ಟ್ರಾವೆಲರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದ್ದು, ಅದೃಷ್ಟವಶಾತ್‌ ವಾಹನದಲ್ಲಿದ್ದ ಬೆಂಗಳೂರು ಮೂಲದ 13 ಮಂದಿ ಪ್ರವಾಸಿಗರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಬೆಂಗಳೂರಿನಿಂದ ಚಿಕ್ಕಮಗಳೂರಿನ ಗಿರಿಪ್ರದೇಶಗಳಿಗೆ ಪ್ರವಾಸಕ್ಕೆ ಬಂದಿದ್ದ ತಂಡ ಮುಳ್ಳಯ್ಯನಗಿರಿ ವೀಕ್ಷಣೆ ಮುಗಿಸಿ ವಾಪಸ್ ಇಳಿಜಾರಿನಲ್ಲಿ ಬರುತ್ತಿದ್ದಾಗ, ಹಿಂಭಾಗದ ಸೀಟಿನಲ್ಲಿದ್ದ ಪ್ರಯಾಣಿಕರೋರ್ವರ ಚಪ್ಪಲಿ ಜಾರಿ ಮುಂಭಾಗದ ಚಾಲಕನ ಸೀಟಿನ ಬಳಿ ಬಂದು ಬಿದ್ದಿದೆ. ಇಳಿಜಾರಿನ ರಸ್ತೆಯಾದ್ದರಿಂದ ಈ ಚಪ್ಪಲಿ ಎಲ್ಲಿ ಬ್ರೇಕ್ ಮತ್ತು ಎಕ್ಸಲೇಟರ್ ಪೆಡಲ್‌ಗಳ ಮಧ್ಯೆ ಸಿಲುಕಿಕೊಳ್ಳುತ್ತದೆಯೋ ಎಂಬ ಆತಂಕದಿಂದಾಗಿ ಚಾಲಕ ತಕ್ಷಣವೇ ಚಲಿಸುತ್ತಿದ್ದ ವಾಹನದಲ್ಲೇ ಬಾಗಿ ಆ ಚಪ್ಪಲಿಯನ್ನು ತೆಗೆಯಲು ಪ್ರಯತ್ನಿಸಿದ್ದಾನೆ.

ಈ ವೇಳೆ ವಾಹನದ ಗೇರ್ ಲಿವರ್ ನ್ಯೂಟ್ರಲ್ ಸ್ಥಿತಿಗೆ ಬಿದ್ದಿದೆ. ಇಳಿಜಾರಿನ ರಸ್ತೆಯಾಗಿದ್ದರಿಂದ ಗೇರ್ ಹಾಕದೆ ಇದ್ದುದರಿಂದ ಟೆಂಪೋ ಒಮ್ಮಿಂದೊಮ್ಮೆಗೇ ಅತಿ ವೇಗವಾಗಿ ಮುಂದಕ್ಕೆ ನುಗ್ಗಿದೆ. ಚಾಲಕ ಬ್ರೇಕ್ ಹಾಕುವಷ್ಟರಲ್ಲೇ ವಾಹನವು ರಸ್ತೆ ಬದಿಯ ರಕ್ಷಣಾ ಗೋಡೆಯನ್ನು ದಾಟಿ ಕಂದಕದ ಕಡೆಗೆ ಇಳಿದಿದೆ.

ವಾಹನ ಕಂದಕಕ್ಕೆ ಇಳಿಯುತ್ತಿದ್ದಂತೆ ಪ್ರಯಾಣಿಕರು ಜೋರಾಗಿ ಕಿರುಚಾಡಿದ್ದು, ಅದೃಷ್ಟವಶಾತ್ ಟೆಂಪೋ ಕಂದಕದ ಆರಂಭದಲ್ಲೇ ಸಿಲುಕಿ ನಿಂತಿದೆ. ವಾಹನದಲ್ಲಿದ್ದ ಎಲ್ಲಾ 13 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸದ್ಯ ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!