ಮಂಗಳೂರು : ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯನ್ನು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಜೊತೆ ವಿಲೀನಗೊಳಿಸಬೇಕು ಹಾಗೂ ಕುದುರೆಮುಖ ಸಂಸ್ಥೆಯ ಕಾರ್ಮಿಕರ ಬಹುದಿನಗಳ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.


ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಬಂಡವಾಳ ಹೂಡಿಕೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಗೆ ಭೇಟಿ ನೀಡಿ ಕೇಂದ್ರದ ಅಧೀನದಲ್ಲಿರುವ ಕೈಗಾರಿಕೆಗಳ ಅಭಿವೃದ್ಧಿ ಕಾರ್ಯಗಳನ್ನು ಖುದ್ದು ಪರಿಶೀಲಿಸಿ, ಸ್ಥಳೀಯ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ ನೀಡಿ ಜಿಲ್ಲಾ ಪ್ರವಾಸ ಕೈಗೊಳ್ಳಬೇಕು ಎಂದು ಕೋರಿದರು.

ರಾಜ್ಯ ಸರಕಾರವು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ ಗಣಿಗಾರಿಕೆಗೆ ಅನುಮತಿ ನೀಡದಿರುವುದರಿಂದ ಕಂಪನಿಯ ಕಾರ್ಯಾಚರಣೆಗೆ ತೀವ್ರ ತೊಡಕಾಗಿದೆ. ಇದರಿಂದ ಕಾರ್ಮಿಕರ ಭವಿಷ್ಯವೂ ಅತಂತ್ರವಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಕುದುರೆಮುಖ ಗಣಿಗಾರಿಕೆ ಸಮಸ್ಯೆಯ ಕುರಿತಾಗಿ ಗಮನಸೆಳೆದಿದ್ದೆ. ಸರ್ಕಾರ ಮಾತ್ರ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಗಣಿಗಾರಿಕೆ ಅನುಮತಿ ನೀಡುವಂತೆ ರಾಜ್ಯ ಸರಕಾರದ ಮೇಲೆ ಕೇಂದ್ರವು ಒತ್ತಡ ಹೇರಬೇಕು ಎಂದು ಶಾಸಕರು ಮನವಿಯಲ್ಲಿ ತಿಳಿಸಿದರು.

ಕುದುರೆಮುಖ ಸಂಸ್ಥೆಯನ್ನು ಎನ್‌ಎಂಡಿಸಿಯೊಂದಿಗೆ ವಿಲೀನಗೊಳಿಸುವುದರಿಂದ ಕಂಪನಿಯ ಪುನಶ್ಚೇತನ ಸಾಧ್ಯವಾಗಲಿದೆ ಹಾಗೂ ಕರಾವಳಿ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಹೊಸ ವೇಗ ದೊರೆಯಲಿದೆ ಎಂದು ಡಾ. ಭರತ್ ಶೆಟ್ಟಿ ಪ್ರತಿಪಾದಿಸಿದರು. ಮತ್ತಿತರ ಕೈಗಾರಿಕಾ ಸಮಸ್ಯೆಗಳ ಕುರಿತು ಸಚಿವರೊಂದಿಗೆ ಚರ್ಚಿಸಿ ವಿವರವಾದ ಮನವಿ ಪತ್ರ ಸಲ್ಲಿಸಿದರು.
