
ಲಕ್ನೋ: ಖಾಸಗಿ ಡಬಲ್ ಡೆಕ್ಕರ್ ಬಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಪರಿಣಾಮ ಬಸ್ ಚಾಲಕ ಸೇರಿದಂತೆ ಇಬ್ಬರು ಸಜೀವ ದಹನಗೊಂಡಿರುವ ಘಟನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು(ಮೇ 22) ಮುಂಜಾನೆ ನಡೆದಿದೆ. ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕಾನ್ಪುರದಿಂದ ಗುರುಗ್ರಾಮದತ್ತ ತೆರಳುತ್ತಿದ್ದ ಖಾಸಗಿ ಬಸ್ ವೇಗವಾಗಿ ಸಾಗುತ್ತಿದ್ದ ವೇಳೆ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತಕ್ಷಣವೇ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ದಿಢೀರನೆ ಬೆಂಕಿ ವ್ಯಾಪಿಸಿದ್ದರಿಂದ ಪ್ರಯಾಣಿಕರಲ್ಲಿ ಆತಂಕ ಮತ್ತು ಗೊಂದಲ ಉಂಟಾಗಿದೆ ಎನ್ನಲಾಗಿದೆ.

ಗಾಯಾಳುಗಳನ್ನು ಫಿರೋಜಾಬಾದ್ ವೈದ್ಯಕೀಯ ಕಾಲೇಜು ಮತ್ತು ಸೈಫೈ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಘಟನೆಯಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.