ಬೆಳ್ತಂಗಡಿ: ವೈದ್ಯರ ನಿರ್ಲಕ್ಷ್ಯ ಆರೋಪ; ಹೋರಿ ಹಾಯ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

ಉಪ್ಪಿನಂಗಡಿ: ಮನೆಯಲ್ಲಿದ್ದ ಹೋರಿ ಹಾಯ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಮೃತರ ಸಹೋದರ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ಮಹಮ್ಮದ್ ಶರೀಫ್ ಪಿ (35) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ದೂರಿನ ವಿವರಗಳ ಪ್ರಕಾರ, ಮೇ 14ರಂದು ರಾತ್ರಿ ಮಹಮ್ಮದ್ ಶರೀಫ್ ಅವರಿಗೆ ಮನೆಯಲ್ಲಿದ್ದ ಹೋರಿ ಹಾಯ್ದು ಗಾಯಗೊಂಡಿದ್ದರು. ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯ ವೈದ್ಯರು ಅತ್ಯಂತ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ್ದರಿಂದ ಗಾಯಾಳು ಮಹಮ್ಮದ್ ಶರೀಫ್ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು ಎಂದು ಕುಟುಂಬಿಕರು ಆರೋಪಿಸಿದ್ದಾರೆ.

ಎರಡು ದಿನಗಳ ಬಳಿಕ ಅಂದರೆ ಮೇ 16ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಮ್ಮದ್ ಶರೀಫ್ ರವರು ಮೇ20 ರಂದು ಮೃತಪಟ್ಟಿರುತ್ತಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ನಾಸಿರುದ್ದೀನ್.ಪಿ. ಬಿನ್ ಸೂಫಿ ಬ್ಯಾರಿ (36) ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ : 28/2026, ಕಲಂ: 194(3) (iv) ಬಿ.ಎನ್.ಎಸ್,ಎಸ್‌ 2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರಣದಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡುವ ಸಲುವಾಗಿ, ವಿಶೇಷ ವೈದ್ಯಕೀಯ ತಂಡವನ್ನು (Medical Board) ರಚಿಸುವಂತೆ ಪೊಲೀಸರು ಸಂಬಂಧಪಟ್ಟ ಇಲಾಖೆಯೊಂದಿಗೆ ಪತ್ರವ್ಯವಹಾರ ನಡೆಸಿದ್ದಾರೆ. ವೈದ್ಯಕೀಯ ತಂಡದ ಅಧಿಕೃತ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.

ಮೂವರು ಕಂದಮ್ಮಗಳ ಆಧಾರಸ್ತಂಭವೇ ಮುರಿದುಬಿತ್ತು!
ಮೃತ ಶರೀಫ್ ಅವರು ಬೀದಿ ಬದಿಯಲ್ಲಿ ತರಕಾರಿ ಮಾರಿ ಅತ್ಯಂತ ಕಷ್ಟದಿಂದ ಇಡೀ ಕುಟುಂಬವನ್ನು ಸಲಹುತ್ತಿದ್ದರು. ಅವರಿಗೆ 10 ವರ್ಷದೊಳಗಿನ ಮೂವರು ಪುಟ್ಟ ಮಕ್ಕಳಿದ್ದಾರೆ. ತಂದೆಯನ್ನೇ ನಂಬಿಕೊಂಡಿದ್ದ ಆ ಮೂರು ಮುಗ್ಧ ಕಂದಮ್ಮಗಳು ಹಾಗೂ ಇಡೀ ಕುಟುಂಬ ಈಗ ಆಧಾರಸ್ತಂಭವನ್ನೇ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಕಣ್ಣೀರಿನಲ್ಲಿ ಮುಳುಗಿದೆ.

error: Content is protected !!