ಮೇ 23: ಮಂಗಳೂರಿನಲ್ಲಿ 4 ಹೈಟೆಕ್ ಸಭಾಂಗಣಗಳ ಲೋಕಾರ್ಪಣೆ; ‘ಇದು ಲಾಭಕ್ಕಲ್ಲ, ಸಮಾಜದ ಸೇವೆಗೆ’– ಪಾಲೆಮಾರ್

ಮಂಗಳೂರು: ಕರಾವಳಿಯ ಹೆಮ್ಮೆಯ ರಿಯಲ್ ಎಸ್ಟೇಟ್ ಸಂಸ್ಥೆ ‘ಲ್ಯಾಂಡ್ ಲಿಂಕ್ಸ್’ ಉದ್ಯಮ ರಂಗದಲ್ಲಿ 45 ವರ್ಷಗಳ ಯಶಸ್ವಿ ಹಾದಿ ಪೂರೈಸಿದ ಸವಿನೆನಪಿಗಾಗಿ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣ ಜೆ. ಪಾಲೆಮಾರ್ ಪ್ರಕಟಿಸಿದರು.

ಲೋಕಾರ್ಪಣೆಗೆ ಸಜ್ಜಾಗಿರುವ ಮಂಗಳೂರಿನ ಮೇರಿಹಿಲ್‌ನಲ್ಲಿರುವ ‘ಪಾಲೆಮಾ‌ರ್ ಕನ್ವೆನ್ಸನ್ ಸೆಂಟರ್’ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅತ್ಯಾಧುನಿಕ ಸೌಲಭ್ಯಗಳು, ಐಷಾರಾಮಿ ವಿನ್ಯಾಸ ಹಾಗೂ ಪ್ರಕೃತಿಯ ಸೊಬಗನ್ನು ಮೈಗೂಡಿಸಿಕೊಂಡಿರುವ ಈ ನಾಲ್ಕು ಅದ್ದೂರಿ ಸಭಾಂಗಣಗಳ ಮಹಾ ಲೋಕಾರ್ಪಣಾ ಸಮಾರಂಭವು ಮೇ 23ರ ಶನಿವಾರದಂದು ಬೆಳಿಗ್ಗೆ 10:00 ಗಂಟೆಗೆ ಮೇರಿಹಿಲ್‌ನಲ್ಲೇ ಅತ್ಯಂತ ವೈಭವದಿಂದ ಜರುಗಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಸನ್ಮಾನ್ಯ ಜ| ಎಸ್. ಅಬ್ದುಲ್ ನಜೀರ್ ಆಗಮಿಸಿ, ನಾಲ್ಕೂ ಸಭಾಂಗಣಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಸಮಾರಂಭದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ, ವಿಧಾನಸಭಾ ಸಭಾಧ್ಯಕ್ಷರಾದ ಯು. ಟಿ. ಖಾದರ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರುಗಳಾದ ಡಾ. ವೈ. ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಐವನ್ ಡಿಸೋಜ ಸೇರಿದಂತೆ ಕರಾವಳಿ ಮತ್ತು ರಾಜ್ಯ ಮಟ್ಟದ ಹಲವಾರು ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಹಾಗೂ ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಕೃಷ್ಣ ಜೆ. ಪಾಲೆಮಾರ್ ಅವರು, “ಈ ನಾಲ್ಕು ಸಭಾಭವನಗಳನ್ನು ನಾನು ಕೇವಲ ಒಬ್ಬ ಉದ್ಯಮಿಯ ಲಾಭದ ದೃಷ್ಟಿಯಿಂದ ನಿರ್ಮಿಸಿದ್ದಲ್ಲ. ಕರಾವಳಿಯ ಜನತೆ ಕಳೆದ 45 ವರ್ಷಗಳಿಂದ ನಮಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಪ್ರತಿಯಾಗಿ, ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬ ಸದುದ್ದೇಶದಿಂದ ಇವುಗಳನ್ನು ರೂಪಿಸಿದ್ದೇನೆ. ಬಡ ಕುಟುಂಬಗಳ ಸಾಮೂಹಿಕ ವಿವಾಹದಂತಹ ಸಂದರ್ಭದಲ್ಲಿ ಹೆತ್ತವರ ಕಣ್ಣಲ್ಲಿ ಕಾಣುವ ಸಾರ್ಥಕತೆ ಮತ್ತು ನೆಮ್ಮದಿಯ ಭಾವವೇ ನನಗೆ ನಿಜವಾದ ಸಂಪತ್ತು” ಎಂದು ಭಾವುಕರಾಗಿ ನುಡಿದರು.

ಉಚಿತ ಸೇವೆ

ಸಂಸ್ಥೆಯು ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಧೈಯ ಹೊಂದಿದೆ ಎಂದು ಸ್ಪಷ್ಟಪಡಿಸಿದ ಅವರು, ಸಮಾಜದ ಒಳಿತಿಗಾಗಿ ಆಯೋಜಿಸುವ ಸಾಮೂಹಿಕ ವಿವಾಹಗಳು ಹಾಗೂ ಸದುದ್ದೇಶದ ಉದಾತ್ತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಎಲ್ಲಾ ಸಭಾಂಗಣಗಳನ್ನು ನಿಯಮಾನುಸಾರವಾಗಿ ಸಂಪೂರ್ಣ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದರು. ಇದೇ ವೇಳೆ, ಲೋಕಾರ್ಪಣಾ ಸಮಾರಂಭದ ಮತ್ತೊಂದು ವಿಶೇಷ ಆಕರ್ಷಣೆಯಾಗಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ವಿಕಾಸ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ನಾಲ್ಕು ಸಭಾಭವನಗಳ ವಿಶಿಷ್ಟತೆಗಳು:
ಲೋಕಾರ್ಪಣೆಗೊಳ್ಳಲಿರುವ ಸಭಾಂಗಣಗಳ ವಿವರ ನೀಡಿದ ಅವರು, ಪ್ರತಿಯೊಂದು ಸಭಾಭವನವನ್ನು ಸರ್ವ ಧರ್ಮದವರೂ ತಮ್ಮ ಇಷ್ಟದ ಶೈಲಿಯಲ್ಲಿ ಅತ್ಯಂತ ಆರಾಮದಾಯಕವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದರು.

ಪಾಲೆಮಾರ್ ಕನ್ವೆನ್ಸನ್ ಸೆಂಟರ್, ಮೇರಿಹಿಲ್: ಇದು ಸಾಂಪ್ರದಾಯಿಕ ಮರದ ಕರಕುಶಲತೆಯ ಭವ್ಯ ಒಳಾಂಗಣ ವಿನ್ಯಾಸ ಹೊಂದಿದ್ದು, ಹೈ-ಟೆಕ್ ಕಾರ್ಪೊರೇಟ್ ಹಾಗೂ ಮದುವೆಗಳಿಗೆ ಸೂಕ್ತವಾಗಿದೆ. ಇಲ್ಲಿ ಶೀಘ್ರದಲ್ಲೇ ‘ಗ್ರೀನ್ ವ್ಯಾಲಿ’ ಎಂಬ ವಿನೂತನ ತೆರೆದ ಸಭಾಂಗಣವೂ ಸಿದ್ಧವಾಗಲಿದೆ.

ಪಾಲೆಮಾರ್ ಗಾರ್ಡನ್, ಮೋರ್ಗನ್ಸ್ ಗೇಟ್:
ನಗರದ ಹೃದಯಭಾಗದಲ್ಲಿದ್ದು, ಪ್ರಶಾಂತವಾದ ಹಸಿರು ಪರಿಸರ, ಸಾಂಪ್ರದಾಯಿಕ ಕಾಟೇಜ್‌ಗಳು ಮತ್ತು ಸುಂದರ ಹೊರಾಂಗಣ ಈಜುಕೊಳದ ಸೌಲಭ್ಯ ಹೊಂದಿದೆ.

ಪಾಲೆಮಾರ್ ಫಾರ್ಮ್ಸ್, ಸುರತ್ಕಲ್: ನಿಸರ್ಗದ ಮೌನದ ನಡುವೆ 20 ಎಕರೆ ವಿಶಾಲವಾದ ಜಾಗದಲ್ಲಿ ಸಿದ್ಧಗೊಂಡಿದ್ದು, ಔಟ್‌ಡೋರ್ ಕಾರ್ಯಕ್ರಮಗಳು, ಮೆಹೆಂದಿ ಹಾಗೂ ಕೌಟುಂಬಿಕ ಸಮಾರಂಭಗಳಿಗೆ ಸೂಕ್ತವಾಗಿದೆ. ಇಲ್ಲಿ ಈಜುಕೊಳ ಹಾಗೂ ಮಕ್ಕಳ ಆಟದ ಪ್ರದೇಶವಿದೆ.

ನೇತ್ರಾವತಿ ಸಭಾಭವನ, ಜೆಪ್ಪಿನಮೊಗರು (ಕಡೆಕಾರ್): ನೇತ್ರಾವತಿ ನದಿಯ ದಡದಲ್ಲಿ, ದೈವಿಕ ಪರಿಸರದಲ್ಲಿ ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ಕೇವಲ ಶುದ್ಧ ಸಾತ್ವಿಕ ಸಸ್ಯಾಹಾರಿ ಆಹಾರ ತಯಾರಿಕೆಗೆ ಮಾತ್ರ ಅವಕಾಶವಿರುತ್ತದೆ.

ಸಾರಿಗೆ ಸೌಲಭ್ಯ ಮತ್ತು ಉದ್ಯೋಗ ಸೃಷ್ಟಿ:
ಸಾರ್ವಜನಿಕರನ್ನು ಕಾಡುವ ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಲ್ಕೂ ಸಭಾಭವನಗಳಲ್ಲಿ ನೂರಾರು ವಾಹನಗಳು ಏಕಕಾಲದಲ್ಲಿ ನಿಲ್ಲಿಸಲು ಅತ್ಯಂತ ವಿಶಾಲವಾದ ಪಾರ್ಕಿಂಗ್ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಪಾಲೆಮಾರ್ ತಿಳಿಸಿದರು.

ಇವೆಲ್ಲವೂ ರಾಷ್ಟ್ರೀಯ ಹೆದ್ದಾರಿ ಹಾಗೂ ಮುಖ್ಯರಸ್ತೆಗಳ ಪಕ್ಕದಲ್ಲಿಯೇ ಇರುವುದರಿಂದ ಅತಿಥಿಗಳು ಸುಲಭವಾಗಿ ತಲುಪಬಹುದು. “ಇದು ಕೇವಲ ಕಟ್ಟಡಗಳ ಉದ್ಘಾಟನೆಯಲ್ಲ, ಇದೊಂದು ಸಾಮಾಜಿಕ ಕ್ರಾಂತಿ. ಈ ಯೋಜನೆಯಿಂದ ಕರಾವಳಿಯ ಡೆಕೋರೇಶನ್, ಕ್ಯಾಟರಿಂಗ್, ಫೋಟೋಗ್ರಾಫಿ ಸೇರಿದಂತೆ ಸ್ಥಳೀಯ ಯುವಕರಿಗೆ ವ್ಯಾಪಕ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಿ ಸ್ಥಳೀಯ ಆರ್ಥಿಕತೆಗೆ ಮಹತ್ತರ ಕೊಡುಗೆ ಸಿಗಲಿದೆ” ಎಂದರು. ಇದೇ ವೇಳೆ, ಅತೀ ಶೀಘ್ರದಲ್ಲಿಯೇ ಮಂಗಳೂರಿನ ಸಮುದ್ರ ತೀರದಲ್ಲೂ ಒಂದು ಸುಸಜ್ಜಿತ ತೆರೆದ ಸಭಾಂಗಣ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂಬ ಪ್ರಮುಖ ಪ್ರಕಟಣೆಯನ್ನು ಅವರು ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಕಾಸ ಎಜುಕೇಶನ್ ಟ್ರಸ್ಟ್ ಟ್ರಸ್ಟಿಗಳಾದ ಜೆ.ಕೆ.ರಾವ್, ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಜೆ.ಸಂತೋಷ್ ಕುಮಾರ್, ಲ್ಯಾಂಡ್ ಲಿಂಕ್ಸ್ ಉಪಾಧ್ಯಕ್ಷ ಪ್ರದೀಪ್ ಪಾಲೆಮಾರ್ ಉಪಸ್ಥಿತರಿದ್ದರು.

ಮಾಹಿತಿ ಹಾಗೂ ಬುಕ್ಕಿಂಗ್‌ಗಾಗಿ ಸಂಪರ್ಕಿಸಿ: 7411394759, 7483574759, 9148435759 ಅಧಿಕೃತ ವೆಬ್‌ ಸೈಟ್: www.palemar.comwww.palemar.com

error: Content is protected !!