ಮೇ 20ರ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ತಡೆ


ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಂದು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ಸಂಘಟನೆಗಳಿಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ನಾಳೆ ಬಸ್ ಸೇವೆಗಳು ಸ್ಥಗಿತಗೊಳ್ಳುವ ಆತಂಕ ತಪ್ಪಿದೆ.

ಕಟ್ಟಡ ಕಾರ್ಮಿಕ ಹಾಗೂ ಮನೆಕೆಲಸದ ಮಹಿಳೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಮುಷ್ಕರ ಕೈಬಿಡುವಂತೆ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ. ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಹೇಳಿ, ಇದೇ ವೇಳೆ ಸಾರಿಗೆ ನೌಕರರ ಸಮಸ್ಯೆಗಳ ಕುರಿತು ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೂ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ (ಮೇ 21) ಮುಂದೂಡಿದೆ.

“ರಾಜ್ಯ ಸರ್ಕಾರ ಈಗಾಗಲೇ 12.5% ವೇತನ ಹೆಚ್ಚಳ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಮುಷ್ಕರ ಸೂಕ್ತವಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಾಲಯದ ಸೂಚನೆ ಬಳಿಕ ನೌಕರರ ಸಮಿತಿಯು ಮುಷ್ಕರ ಹಿಂಪಡೆಯಲು ನಿರ್ಧರಿಸಿದೆ. ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

error: Content is protected !!