ಹೂಳೆತ್ತುವ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದ ಇಬ್ಬರು ಕಾರ್ಮಿಕರು

ಬಂಟ್ವಾಳ: ಬಾವಿಯೊಂದರ ಹೂಳೆತ್ತುವ ಕೆಲಸ ಮುಗಿಸಿ ಮೇಲೆ ಬರುವ ವೇಳೆ ಹಗ್ಗ ತುಂಡಾಗಿ ಇಬ್ಬರು ಕಾರ್ಮಿಕರು ಜಾರಿ ಬಿದ್ದಿರುವ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳದ ಕುಕ್ಕಾಜೆ ಎಂಬಲ್ಲಿ ಭಾನುವಾರ(ಮೇ.17) ಸಂಜೆ ವೇಳೆ ನಡೆದಿದೆ.

ಬರಿಮಾರು ನಿವಾಸಿಗಳಾದ ಪದ್ಮನಾಭ ಮತ್ತು ರಾಮ ಗಾಯಾಳುಗಳು.

ಕುರಿಯಾಳ ಗ್ರಾಮದ ಕುಕ್ಕಾಜೆ ಕೇಶವ ಪೂಜಾರಿ ಎಂಬವರ ಬಾವಿಯ ಹೂಳೆತ್ತುವುದಕ್ಕೆ ಬಂದ ಪದ್ಮನಾಭ ಹಾಗೂ ರಾಮ ಎಂಬವರು ಕೆಲಸ ಮುಗಿಸಿ, ವಾಪಸು ಬಾವಿಯೊಳಗಿನಿಂದ ಹಗ್ಗ ಹಿಡಿದು ಮೇಲೆಕ್ಕೆ ಬರುತ್ತಿದ್ದ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲಿ ಓರ್ವರ ಕಾಲಿಗೆ ಗಾಯವಾಗಿದೆ.

ಸುಮಾರು 40 ಅಡಿ ಆಳದ ಬಾವಿ ಇದಾಗಿದ್ದು, ಅರ್ಧಕ್ಕೆ ಬರುತ್ತಿದ್ದಂತೆ ಹಗ್ಗ ತುಂಡಾಗಿದೆ ಎನ್ನಲಾಗಿದೆ. ಬಾವಿಯೊಳಗೆ ಬಿದ್ದ ಇಬ್ಬರಲ್ಲಿ ಒಬ್ಬರ ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು ಇನ್ನೊಬ್ಬರು ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಇವರನ್ನ ಸುರಕ್ಷಿತವಾಗಿ ಮೇಲೆತ್ತುವ ಕಾರ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ನಡೆದಿದೆ.

error: Content is protected !!