ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮುಂಗಾರು ಪೂರ್ವ ಮಾರುತಗಳ ಅಬ್ಬರ ತೀವ್ರಗೊಂಡಿದ್ದು, ನೆರೆ ರಾಜ್ಯವಾದ ಕೇರಳದಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಪರಿಣಾಮವಾಗಿ ದಕ್ಷಿಣ ಕನ್ನಡದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದು, ಪ್ರಸ್ತುತ ಕೇರಳಕ್ಕೆ ಪ್ರವಾಸ ಕೈಗೊಳ್ಳುವ ಯೋಜನೆ ಇದ್ದರೆ ಅದನ್ನು ತಕ್ಷಣವೇ ಮುಂದೂಡುವಂತೆ ಸಲಹೆ ನೀಡಿದೆ.

ಕೇರಳದ ಹವಾಮಾನ ಪರಿಸ್ಥಿತಿ ತೀವ್ರ ಬಿಗಡಾಯಿಸುತ್ತಿದ್ದು, ರಾಜ್ಯದ ಒಟ್ಟು ಎರಡು ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ʻಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಇದರೊಂದಿಗೆ ಮುನ್ನೆಚ್ಚರಿಕೆಯಾಗಿ ಮತ್ತ ಒಂಬತ್ತು ಜಿಲ್ಲೆಗಳಲ್ಲಿ ʻಯೆಲ್ಲೋ ಅಲರ್ಟ್’ ಜಾರಿಗೊಳಿಸಲಾಗಿದೆ. ಬಿರುಗಾಳಿ ಸಹಿತ ನಿರಂತರ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.

ಸಾರ್ವಜನಿಕರಿಗೆ ಪ್ರಮುಖ ಸೂಚನೆ: ಭಾರೀ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತ, ಭೂಕುಸಿತ ಹಾಗೂ ಪ್ರವಾಹದಂತಹ ಪರಿಸ್ಥಿತಿಗಳು ತಲೆದೋರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸದ್ಯಕ್ಕೆ ಕೇರಳ ಪ್ರಯಾಣದ ನಿರ್ಧಾರವನ್ನು ಕೈಬಿಡುವುದು ಪ್ರಾಣಾಪಾಯ ಹಾಗೂ ಇತರೆ ತೊಂದರೆಗಳಿಂದ ಪಾರಾಗಲು ಸೂಕ್ತ ಎಂದು ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
