650 ಮಾರ್ಕ್ಸ್ ತರದಿದ್ರೆ ಮರ್ಯಾದೆ ಹೋಗುತ್ತೆ ಅಂದಿದ್ದ ತಂದೆ! ಅಪ್ಪನ ಹುಸಿ ಪ್ರತಿಷ್ಠೆಗೆ ಬಲಿಯಾದ ನೀಟ್ ಆಕಾಂಕ್ಷಿ!

ಸಿಕರ್ (ರಾಜಸ್ಥಾನ): “ನನ್ನ ಮಗ 650 ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ, ಈ ಬಾರಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯುತ್ತಾನೆಂಬ ಭರವಸೆಯಿತ್ತು”—ಇದು ರಾಜಸ್ಥಾನದ ಸಿಕರ್‌ನಲ್ಲಿ ನೀಟ್ (NEET) ಪರೀಕ್ಷೆ ರದ್ದಾದ ಆಘಾತಕ್ಕೆ ನೇಣಿಗೆ ಶರಣಾದ ಪ್ರದೀಪ್ ಮೇಘವಾಲ್ (21) ಎಂಬ ಯುವಕನ ಸಾವಿನ ಬಳಿಕ ಆತನ ತಂದೆ ರಾಜೇಶ್ ಕುಮಾರ್ ಮೇಘವಾಲ್ ನೀಡಿರುವ ಜವಾಬ್ದಾರಿರಹಿತ ಹೇಳಿಕೆ!

ಮಗ ಸತ್ತ ಮೇಲೂ ಈ ತಂದೆಗೆ ಆತನ ಅಂಕಗಳದ್ದೇ ಚಿಂತೆ ಇತ್ತೇ ವಿನಃ, ಆ ಅಂಕಗಳ ನಿರೀಕ್ಷೆಯು ಮಗನ ಮನಸ್ಸಿನ ಮೇಲೆ ಹೇರಿದ್ದ ನರಕಯಾತನೆಯ ಅರಿವಿರಲಿಲ್ಲ. ತಂದೆ ಹಾಕಿದ “650 ಮಾರ್ಕ್ಸ್ ತೆಗೆಯಲೇಬೇಕು” ಎಂಬ ಅತಿಯಾದ ಮಾನಸಿಕ ಒತ್ತಡವೇ ಕೊನೆಗೂ ಆ ಅಮಾಯಕ ಯುವಕನನ್ನು ಫ್ಯಾನ್ ಹಗ್ಗಕ್ಕೆ ತಳ್ಳಿದೆ.

ಮೂಲತಃ ಜುಂಜುನು ಜಿಲ್ಲೆಯ ಗುಢಾ ಗೌಡ್ಜಿಯ ಪ್ರದೀಪ್, ಕಳೆದ ಮೂರು ವರ್ಷಗಳಿಂದ ತನ್ನ ಇಬ್ಬರು ಸಹೋದರಿಯರೊಂದಿಗೆ ಸಿಕರ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದ. ಕಿರಿದಾದ ಕೋಣೆಯಲ್ಲಿ ಹಗಲಿರುಳು ಪುಸ್ತಕ ಹಿಡಿದು ಕುಳಿತುಕೊಳ್ಳುವಂತೆ ಆತನಿಗೆ ತಂದೆ ನಿರಂತರವಾಗಿ ಪೀಡಿಸುತ್ತಿದ್ದ. ಮೇ 3 ರಂದು ನಡೆದಿದ್ದ ಪರೀಕ್ಷೆಯನ್ನು ಆತ ಅತ್ಯಂತ ಚೆನ್ನಾಗಿ ಬರೆದಿದ್ದರೂ, ತಂದೆಯ ನಿರೀಕ್ಷೆಗಳು ಮಾತ್ರ ಆತನ ಬೆನ್ನನ್ನು ಬಿಟ್ಟಿರಲಿಲ್ಲ. “ಇಷ್ಟು ವರ್ಷ ಕೋಚಿಂಗ್ ಕೊಡಿಸಿದ್ದೇನೆ, ಸಾಲ ಮಾಡಿದ್ದೇನೆ, ಈ ಬಾರಿ 650 ಕ್ಕಿಂತ ಒಂದು ಅಂಕ ಕಡಿಮೆ ಬಂದರೂ ಮರ್ಯಾದೆ ಹೋಗುತ್ತದೆ” ಎಂಬ ತಂದೆಯ ಹುಸಿ ಪ್ರತಿಷ್ಠೆಯ ಮಾತುಗಳು ಆತನ ತಲೆಯಲ್ಲಿ ದಿನದ 24 ಗಂಟೆಯೂ ಓಡುತ್ತಿದ್ದವು.

ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿತು. ಈ ಸುದ್ದಿ ಕೇಳಿದ ತಕ್ಷಣ ಪ್ರದೀಪ್ ತೀವ್ರ ಖಿನ್ನತೆಗೆ ಜಾರಿದ್ದ. ಅದಕ್ಕೆ ಕಾರಣ, ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾದ ಕಷ್ಟವಲ್ಲ; ಬದಲಿಗೆ “ಇನ್ನೊಂದು ಬಾರಿ ಪರೀಕ್ಷೆ ಬರೆಯಲು ತಂದೆ ಒಪ್ಪುತ್ತಾರಾ? 650 ಮಾರ್ಕ್ಸ್ ಬರದಿದ್ದರೆ ತಂದೆ ಹೇಗೆ ರಿಯಾಕ್ಟ್ ಮಾಡುತ್ತಾರೆ?” ಎಂಬ ಭೀತಿ. ಶುಕ್ರವಾರ ಮಧ್ಯಾಹ್ನ ತಂಗಿ ಕೋಚಿಂಗ್‌ಗೆ ಹೋಗಿದ್ದಾಗ, ಅಕ್ಕ ಬಾತ್‌ರೂಮ್‌ನಲ್ಲಿದ್ದ ಕೆಲವೇ ನಿಮಿಷಗಳ ಅವಧಿಯಲ್ಲಿ ಆಕೆ ಧರಿಸುತ್ತಿದ್ದ ಸ್ಕಾರ್ಫ್‌ನಿಂದಲೇ ಪ್ರದೀಪ್ ನೇಣು ಬಿಗಿದುಕೊಂಡಿದ್ದಾನೆ. ಅಕ್ಕ ಹೊರಬಂದು ಕತ್ತರಿ ಬಳಸಿ ಸ್ಕಾರ್ಫ್ ಕತ್ತರಿಸಿ ಆಸ್ಪತ್ರೆಗೆ ಸಾಗಿಸಿದರೂ ಆತ ಬದುಕುಳಿಯಲಿಲ್ಲ. ತಂದೆಯ ನಿರೀಕ್ಷೆಯ ಬೆಟ್ಟಕ್ಕೆ ಆತ ಹೆಣವಾಗಿ ಬಿದ್ದಿದ್ದ.

ಪ್ರದೀಪ್ ಮೇಘವಾಲ್ ಸಾವಿನ ಬೆನ್ನಲ್ಲೇ ದೇಶದ ಬೇರೆ ಬೇರೆ ಭಾಗಗಳಿಂದಲೂ ಇಂತಹದ್ದೇ ಹೃದಯವಿದ್ರಾವಕ ಘಟನೆಗಳು ವರದಿಯಾಗಿವೆ. ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ರಿತಿಕ್ ಮಿಶ್ರಾ (21) ಎಂಬ ಯುವಕ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗುವ ಭರವಸೆ ಹೊಂದಿದ್ದರೂ, ಪರೀಕ್ಷೆ ರದ್ದತಿಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯ ಆಜಾದ್‌ಪುರದಲ್ಲೂ 20 ವರ್ಷದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಇತ್ತ ಗೋವಾದ ಮಾರ್ಗೋದಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಶೈಕ್ಷಣಿಕ ಒತ್ತಡವನ್ನು ತಾಳಲಾರದೆ ನೇಣಿಗೆ ಶರಣಾಗಿದ್ದಾನೆ. ಪೇಪರ್ ಲೀಕ್ ಮಾಡುವ ಭ್ರಷ್ಟರ ಹಾವಳಿ ಮತ್ತು ಸರ್ಕಾರದ ಸರಿಯಾದ ನಿರ್ವಹಣೆ ಇಲ್ಲದಿರುವುದು ದೇಶದ ಯುವಶಕ್ತಿಯನ್ನು ಈ ರೀತಿ ಬಲಿಪಡೆಯುತ್ತಿದೆ.

error: Content is protected !!