ಬಜಾರ್‌ನಲ್ಲಿ ತರಕಾರಿಯಂತೆ ಮಾರಾಟವಾಯ್ತು ನೀಟ್ ಸೀಟು! 720 ಕ್ಕೆ 600 ಮಾರ್ಕ್ಸ್ ಗ್ಯಾರಂಟಿ ನೀಡಿದ್ದ ಕಿಲಾಡಿಯ ಡಾರ್ಕ್ ರೂಮ್ ಡೀಲಿಂಗ್ಸ್ ಬಟಾಬಯಲು!

ನವದೆಹಲಿ: ದೇಶದ ಯಾವುದೋ ಮೂಲೆಯಲ್ಲಿ ಕಡು ಬಡತನದ ನಡುವೆ, ದಿನಕ್ಕೆ ಹದಿನೆಂಟು ಗಂಟೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮೆಡಿಕಲ್ ಸೀಟು ಸಿಗಬಹುದು ಅಂತ ಒಬ್ಬ ಬಡ ವಿದ್ಯಾರ್ಥಿ ಓದುತ್ತಿರುತ್ತಾನೆ. ಇತ್ತ ನಾಸಿಕ್‌ನ ಇಂದಿರಾನಗರದ ಕತ್ತಲ ಕೋಣೆಯೊಂದರಲ್ಲಿ 30 ವರ್ಷದ ಬಿಎಎಂಎಸ್ ಮುಗಿಸದ ಡಾಕ್ಟರ್ ಶುಭಂ ಖೈರ್ನಾರ್, ಹಲ್ಲು ಬಿಡುತ್ತಾ ಮೊಬೈಲ್‌ನಲ್ಲಿ ಕೋಟಿ ಕೋಟಿ ರೂಪಾಯಿಯ ದಂಧೆ ಕುದುರಿಸುತ್ತಿರುತ್ತಾನೆ! ಅದುವೇ ನೀಟ್-ಯುಜಿ (NEET-UG) ಪರೀಕ್ಷೆಯ ಪೇಪರ್ ಲೀಕ್ ಸಾಮ್ರಾಜ್ಯ.

ಸಿಬಿಐ ಅಧಿಕಾರಿಗಳು ಆತನ ವಾಟ್ಸಾಪ್ ಚಾಟ್ ಹಿಸ್ಟರಿಯನ್ನು ಅಗೆದು ಹೊರತೆಗೆದಾಗ ಸಿಕ್ಕಿರುವ ಸತ್ಯಗಳು ಇಡೀ ದೇಶದ ಕಣ್ಣು ಕೆಂಪಾಗುವಂತೆ ಮಾಡಿದೆ. ಈ ಕಿಲಾಡಿ ಶುಭಂ, ಪರೀಕ್ಷೆ ಬರೆಯುವ ಶ್ರೀಮಂತ ಅಪ್ಪಂದಿರ ಮುದ್ದಿನ ಮಕ್ಕಳಿಗೆ ಮೆಸೇಜ್ ಕಳಿಸಿ ಏನ್ ಹೇಳ್ತಿದ್ದ ಗೊತ್ತಾ? “ನೋಡ್ ಗುರು, 720 ಕ್ಕೆ 500 ರಿಂದ 600 ಮಾರ್ಕ್ಸ್ ಬರೋದು ಗ್ಯಾರಂಟಿ. ಸೀಟು ನಿಮ್ಮ ಕೈ ಸೇರೋದು ಪಕ್ಕಾ!” ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಇವನು ಬಜಾರ್‌ನಲ್ಲಿ ತರಕಾರಿ ಮಾರಿದ ಹಾಗೆ ಹರಾಜಿಗಿಟ್ಟಿದ್ದ!

ಮೇ 3 ರಂದು ನಡೆಯಬೇಕಿದ್ದ ಪರೀಕ್ಷೆಗೆ ಏಪ್ರಿಲ್ ತಿಂಗಳಲ್ಲೇ ಸ್ಕೆಚ್ ರೆಡಿಯಾಗಿತ್ತು. ಪುಣೆಯಲ್ಲಿದ್ದ ಯಶ್ ಯಾದವ್ ಎಂಬ ಅಂಡರ್‌ವರ್ಲ್ಡ್ ಸಪ್ಲೈಯರ್ ಜೊತೆ ಶುಭಂ ನಿರಂತರ ಟಚ್‌ನಲ್ಲಿದ್ದ. ಸರಿಯಾಗಿ ಏಪ್ರಿಲ್ 29ರ ರಾತ್ರಿ ಇವರ ಮಧ್ಯೆ ಪೇಪರ್ ಲೀಕ್‌ನ ಅಂತಿಮ ಡೀಲ್ ಕುದುರಿತು. ಪುಣೆಯ ಶಂಕಿತನಿಂದ ಕೇವಲ 10 ಲಕ್ಷ ರೂಪಾಯಿಗೆ ದೇಶದ ಅತಿ ದೊಡ್ಡ ಪರೀಕ್ಷೆಯ ರಹಸ್ಯ ಪೇಪರ್ ಅನ್ನು ಕೊಂಡುಕೊಂಡ ಈ ಶುಭಂ, ಅದನ್ನು ಹರಿಯಾಣದ ಮತ್ತೊಬ್ಬ ದಲ್ಲಾಳಿಗೆ ಬರೋಬ್ಬರಿ 15 ಲಕ್ಷಕ್ಕೆ ಮಾರಿ, ಒಂದೇ ರಾತ್ರಿಯಲ್ಲಿ 5 ಲಕ್ಷ ರೂಪಾಯಿ ಕಿಸೆಗೆ ಇಳಿಸಿಕೊಂಡಿದ್ದ. ಅಲ್ಲಿಂದ ಮಹಾರಾಷ್ಟ್ರ, ಹರಿಯಾಣದ ಗುರುಗ್ರಾಮ್, ರಾಜಸ್ಥಾನದ ಸಿಕರ್ ಕೋಚಿಂಗ್ ಹಬ್‌ಗಳು, ಜಮ್ಮು-ಕಾಶ್ಮೀರ, ಬಿಹಾರ್ ಹಾಗೂ ಕೇರಳದವರೆಗೆ ಈ ವಿಷಜಾಲ ಹರಡುತ್ತಾ ಹೋಯಿತು.

ತಲೆ ಬೋಳಿಸಿಕೊಂಡರೂ ಬಿಡದ ಖಾಕಿ ಪಡೆ!
ಯಾವಾಗ ಹಗರಣ ಬಯಲಿಗೆ ಬಂದು ಮೇ 3ರ ಪರೀಕ್ಷೆ ರದ್ದಾಯಿತೋ, ಶುಭಂ ತಲೆಮರೆಸಿಕೊಂಡಿದ್ದ. ಇಲಾಖೆಯ ಕಣ್ಣಿಗೆ ಮಣ್ಣೆರಚಲು ತನ್ನ ಉದ್ದನೆಯ ಕೂದಲನ್ನು ಕತ್ತರಿಸಿ, ಕಂಪ್ಲೀಟ್ ಮೊಟ್ಟೆ ಹೊಡೆಸಿಕೊಂಡು ರೂಪವನ್ನೇ ಬದಲಾಯಿಸಿಕೊಂಡಿದ್ದ. ಆದರೆ ಸಿಬಿಐ ಬಿಡಬೇಕಲ್ಲ? ತಾಂತ್ರಿಕ ಕಣ್ಗಾವಲು ಹಾಗೂ ಹಳೆಯ ಫೋಟೋಗಳ ತನಿಖೆ ನಡೆಸಿದ ಅಧಿಕಾರಿಗಳು ಆತನ ಬೆನ್ನು ಬಿದ್ದಿದ್ದರು. ಕಳೆದ ಮಂಗಳವಾರ ಮಧ್ಯಾಹ್ನ, ತನ್ನ ಪಾಪದ ಕೊಡ ತುಂಬಿದ್ದಕ್ಕೆ ದೇವಸ್ಥಾನವೊಂದಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದ ದಾರಿಯಲ್ಲೇ ಸಿಬಿಐ ಪಡೆ ಈತನ ಕಾಲರ್ ಹಿಡಿದು ಎಳೆದೊಯ್ದಿದೆ!

error: Content is protected !!