NEET ಪತ್ರಿಕೆ ಸೋರಿಕೆ: ಐವರು ಆರೋಪಿಗಳ 7 ದಿನಗಳ ಸಿಬಿಐ ವಶಕ್ಕೆ ನ್ಯಾಯಾಲಯ ಆದೇಶ

ಹೊಸದಿಲ್ಲಿ: NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಐವರು ಆರೋಪಿಗಳನ್ನು ಮತ್ತೆ ಏಳು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲು ದಿಲ್ಲಿಯ ವಿಶೇಷ ನ್ಯಾಯಾಲಯ ಗುರುವಾರ(ಮೇ 14) ಆದೇಶಿಸಿದೆ.

ನಾಶಿಕ್‌ ನ ಶುಭಂ ಖೈರ್ನಾರ್‌, ಜೈಪುರದ ಮಂಗಿಲಾಲ್‌ ಬಿವಾಲ್‌, ವಿಕಾಸ್‌ ಬಿವಾಲ್‌, ದಿನೇಶ್‌ ಬಿವಾಲ್‌ ಹಾಗೂ ಗುರುಗ್ರಾಮದ ಯಶ್‌ ಯಾದವ್‌ ಬಂಧಿತರು.

ಮೇ 3ರಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ನಡೆಸಿದ್ದ NEET ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಸಿಬಿಐ ಐವರನ್ನು ಬಂಧಿಸಿತ್ತು. ಅಕ್ರಮದ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಆರೋಪಿಗಳನ್ನು ಇನ್ನಷ್ಟು ವಿಚಾರಣೆಗೊಳಪಡಿಸುವ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಅಜಯ್‌ ಗುಪ್ತ ನಡೆಸಿದರು.

ವಿವಿಧ ರಾಜ್ಯಗಳಿಂದ ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆದುಕೊಂಡ ಬಳಿಕ ಆರೋಪಿಗಳನ್ನು ಸಿಬಿಐ ತನ್ನ ವಶಕ್ಕೆ ಪಡೆದಿತ್ತು.

error: Content is protected !!