ಮಂಗಳೂರು: ಕರ್ನಾಟಕ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮೇಲಿದ್ದ ನಿಷೇಧವನ್ನು ಹಿಂಪಡೆಯಲು ನೀಡಿರುವ ಆದೇಶವು ಅತ್ಯಂತ ಖಂಡನೀಯ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಮಾನತೆಯ ಕೇಂದ್ರಗಳಾಗಿರಬೇಕು. ಆದರೆ ಈ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಸರ್ಕಾರವೇ ಶಿಕ್ಷಣ ಸಂಸ್ಥೆಗಳ ಒಳಗೆ ಮತಾಂಧತೆಯನ್ನು ತರುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಆದೇಶವು ಕೇವಲ ಹಿಜಾಬ್‌ಗೆ ಸಂಬಂಧಿಸಿದ್ದಲ್ಲ, ಬದಲಿಗೆ ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆಯನ್ನು ಅಂತ್ಯಗೊಳಿಸುವುದೇ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಪಂಪುವೆಲ್ ಆರೋಪಿಸಿದ್ದಾರೆ. ಇದನ್ನು ಓಲೈಕೆ ರಾಜಕಾರಣದ ಪರಮಾವಧಿ ಎಂದು ಕರೆದಿರುವ ಅವರು, ಸರ್ಕಾರವು ವಿದ್ಯಾರ್ಥಿಗಳ ನಡುವೆ ವಿಷಬೀಜ ಬಿತ್ತುತ್ತಿದೆ ಎಂದು ದೂರಿದ್ದಾರೆ.

ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ರಾಜ್ಯದ ಯುವಜನತೆ ಬೀದಿಗಿಳಿದು ಹೋರಾಟ ನಡೆಸಬೇಕಾದ ಅಗತ್ಯವಿದೆ. ಈ ‘ತುಘಲಕ್ ಸರ್ಕಾರ’ದ ವಿರುದ್ಧ ಹೋರಾಟ ನಡೆಸುವ ಯುವಶಕ್ತಿಗೆ ವಿಶ್ವ ಹಿಂದೂ ಪರಿಷದ್ ಹಾಗೂ ಅದರ ಯುವ ವಿಭಾಗಗಳಾದ ಬಜರಂಗದಳ ಮತ್ತು ದುರ್ಗಾವಾಹಿನಿ ಸಂಪೂರ್ಣ ಬೆಂಬಲ ನೀಡಲಿವೆ ಎಂದು ಶರಣ್ ಪಂಪುವೆಲ್ ಸ್ಪಷ್ಟಪಡಿಸಿದ್ದಾರೆ.
