ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕನ ಮೇಲೆ ದೌರ್ಜನ್ಯ ನಡೆಸಿದ ಆರೋಪದಡಿ ಪದಚ್ಯುತ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

‘ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಪುತ್ರನಿಂದ ವಚನಾನಂದ ಸ್ವಾಮೀಜಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿ ತಾಯಿಯೊಬ್ಬರು ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲ್ಲೂಕಿನಲ್ಲಿ ದೂರು ನೀಡಿದ್ದರು. ಆದರೆ ಈ ಪ್ರಕರಣದ ತನಿಖೆಯನ್ನು ಕೃತ್ಯ ನಡೆದ ಸ್ಥಳದ ವ್ಯಾಪ್ತಿಯ ಹರಿಹರದ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದು, ತನಿಖೆ ಆರಂಭಿಸಿದ್ದೇವೆ. ಸಂತ್ರಸ್ತ ಬಾಲಕನ ಹೇಳಿಕೆ ಪಡೆಯಲಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್.ಟಿ. ಶೇಖರ್ ತಿಳಿಸಿದ್ದಾರೆ.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠ ಟ್ರಸ್ಟ್ ಸ್ವಾಮೀಜಿ ಅವರನ್ನು ಇತ್ತೀಚೆಗೆ ಪೀಠದಿಂದ ಪದಚ್ಯುತಗೊಳಿಸಿತ್ತು. ಮಠದಲ್ಲಿದ್ದ ಮಕ್ಕಳಿಂದ ಸ್ವಾಮೀಜಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪ ಆ ಬಳಿಕ ಕೇಳಿ ಬಂದಿತ್ತು. ಈ ಸಂಬಂಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಸೇರಿದಂತೆ ಹಲವರ ಹೇಳಿಕೆ ದಾಖಲಿಸಿಕೊಂಡಿತ್ತು.

ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಾಗುತ್ತಿದ್ದಂತೆಯೇ ನ್ಯಾಯಾಲಯದ ಮೊರೆ ಹೋಗಿದ್ದ ವಚನಾನಂದ ಸ್ವಾಮೀಜಿ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ- 482ರ ಅಡಿ ನಿರೀಕ್ಷಣಾ ಜಾಮೀನು ಕೋರಿ ಏ.21ರಂದು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಪೋಕ್ಸೊ ವಿಶೇಷ ನ್ಯಾಯಾಲಯ) ಸ್ವಾಮೀಜಿಗೆ ಮೇ 2ರಂದು ಜಾಮೀನು ಮಂಜೂರು ಮಾಡಿತ್ತು.

ಸಂತ್ರಸ್ತ ಬಾಲಕನಿಗೆ ಈಗ 16 ವರ್ಷ. ಹರಿಹರ ಬಳಿಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ, 2021ರಿಂದ 2024ರವರೆಗೆ ಮಠದ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದ. ಈ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ದೂರಿನಲ್ಲಿದೆ.
‘ವಸತಿ ನಿಲಯದ ಬಾಲಕರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಸ್ನಾನದ ಕೊಠಡಿಗೆ ತೆರಳುತ್ತಿದ್ದ ಸ್ವಾಮೀಜಿ, ಬಟ್ಟೆ ಬಿಚ್ಚಿಸಿ ತಾವು ಕೂಡ ಬೆತ್ತಲಾಗುತ್ತಿದ್ದರು. ದೇಹದ ಖಾಸಗಿ ಭಾಗ ಸೇರಿದಂತೆ ಎಲ್ಲೆಡೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಬಾಲಕರ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಸಂತ್ರಸ್ತ ಬಾಲಕನ ತಾಯಿ ಠಾಣೆಗೆ ನೀಡಿದ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.