ಕಾಸರಗೋಡು: ಅದು ಶುರುವಾಗಿದ್ದು 2013ರಲ್ಲಿ. ಅಂದು ಉಮ್ಮನ್ ಚಾಂಡಿ ಶಂಕುಸ್ಥಾಪನೆ ಮಾಡಿದ್ದ ಆಸ್ಪತ್ರೆ ಬಿಲ್ಡಿಂಗ್, ಇವತ್ತು ಹನ್ನೆರಡು ವರ್ಷ ಕಳೆದರೂ ಅನಾಥವಾಗಿ ನಿಂತಿತ್ತು. ಕಾಸರಗೋಡಿನ ಬದಿಯಡ್ಕ ಪಂಚಾಯತ್‌ನ ಉಕ್ಕಿನಡ್ಕದಲ್ಲಿರುವ ಈ ಬಿಲ್ಡಿಂಗ್ ಅನ್ನು ಜನ ಇಷ್ಟು ದಿನ ʻಭೂತ ಬಂಗಲೆ’ ಅಂತಾನೇ ಕರೀತಿದ್ರು!

ಹತ್ತು ವರ್ಷಗಳ ಕಾಲ ಎಡರಂಗದ (LDF) ಸರ್ಕಾರ ಈ ಆಸ್ಪತ್ರೆಯನ್ನು ಅತಂತ್ರವಾಗಿ ಬಿಟ್ಟಿತ್ತು. ಯಾವಾಗ ಸೋಷಿಯಲ್ ಮೀಡಿಯಾದಲ್ಲಿ ಜನ ಉಗಿಯೋಕೆ ಶುರು ಮಾಡಿದ್ರೋ, ಯಾವಾಗ ಬೀದಿಗಿಳಿದು ಹೋರಾಟ ಮಾಡಿದ್ರೋ, ಆಗ ಕೇರಳದ ಆರೋಗ್ಯ ಮಂತ್ರಿ ವೀಣಾ ಜಾರ್ಜ್ ಅವರಿಗೆ ಬೆವರು ಇಳಿದಿತ್ತು. ಅವರು ಒಂದು ವಿಡಿಯೋ ಬಿಟ್ಟು “ಎಲ್ಲಾ ಸರಿ ಮಾಡ್ತೀವಿ” ಅಂತ ಅರೆಬರೆ ಸುಳ್ಳುಗಳನ್ನು ಹೇಳಿ ಕೈ ತೊಳೆದುಕೊಂಡಿದ್ರು.

ಈ ಬಿಲ್ಡಿಂಗ್‌ನ ಕಥೆ ನೋಡಿ; ಒಬ್ಬ ಕಂಟ್ರಾಕ್ಟರ್ ಸಿವಿಲ್ ಕೆಲಸ ಮಾಡಿದ್ರೆ, ಇನ್ನೊಬ್ಬ ಪೈಪ್ ಮತ್ತು ಎಲೆಕ್ಟ್ರಿಕ್ ಕೆಲಸ ಮಾಡಬೇಕು. ಈ ಇಬ್ಬರು ಕಂಟ್ರಾಕ್ಟರ್‌ಗಳ ಮಧ್ಯೆ ʻಮೊದಲು ನೀನಾ, ಮೊದಲು ನಾನಾ?’ ಅನ್ನೋ ಜಗಳ ಶುರುವಾಗಿ, ಎರಡು ವರ್ಷಗಳಿಂದ ಕೆಲಸವೇ ನಿಂತು ಹೋಗಿತ್ತು. ಪಾಪ, ಕಾಸರಗೋಡಿನ ಜನ ಮಾತ್ರ ಒಂದು ಸಣ್ಣ ಪೆಟ್ಟಾದ್ರೂ ಮಂಗಳೂರಿನ ಆಸ್ಪತ್ರೆಗಳಿಗೆ ಓಡಬೇಕಾದ ದೈನೇಸಿ ಸ್ಥಿತಿ ಇವತ್ತಿಗೂ ಬದಲಾಗಿಲ್ಲ.

ಬುಧವಾರ ಕಾಸರಗೋಡಿನ ಹೊಸ ಎಂಎಲ್ಎ ಕಲ್ಲಟ ಮಹೀನ್ ಉಕ್ಕಿನಡ್ಕಕ್ಕೆ ಭೇಟಿ ಕೊಟ್ಟಿದ್ದಾರೆ. ತಿರುವನಂತಪುರದಿಂದ ಬಂದ ಟೆಕ್ನಿಕಲ್ ಟೀಮ್, “ಇಬ್ಬರು ಕಂಟ್ರಾಕ್ಟರ್‌ಗಳ ಮಧ್ಯೆ ಸಂಧಾನ ಮಾಡಿಸಿದ್ದೀವಿ, ಇನ್ಮೇಲೆ ಕೆಲಸ ನಿಲ್ಲಲ್ಲ” ಅಂತ ಭರವಸೆ ಕೊಟ್ಟಿದೆ. ದೆಹಲಿಯ ತ್ರಿಲೋಕ್ ಅಂಡ್ ಅಸೋಸಿಯೇಟ್ಸ್ ಕಂಪನಿಗೆ 45 ಕೋಟಿಯ ಕಾಂಟ್ರಾಕ್ಟ್ ಕೊಡಲಾಗಿದೆ. ಒಂದು ವರ್ಷದಲ್ಲಿ ಮುಗಿಸ್ತೀವಿ ಅಂತ ಅವ್ರು ಹೇಳಿದ್ದಾರೆ ನಿಜ, ಆದ್ರೆ ಕಾಸರಗೋಡು ಜನಕ್ಕೆ ಸುಸಜ್ಜಿತ ಆಸ್ಪತ್ರೆ ಸಿಗೋದು ಮಾತ್ರ 2028ರಲ್ಲೇ ಅಂತೆ!

ಇನ್ನೊಂದು ಕಾಮಿಡಿ ಅಂದ್ರೆ, ಮೆಡಿಕಲ್ ಕಾಲೇಜ್‌ನಲ್ಲಿ ಮೊದಲ ಬ್ಯಾಚ್‌ನ 50 ವಿದ್ಯಾರ್ಥಿಗಳು ಸೇರಿಕೊಂಡು ಬಿಟ್ಟಿದ್ದಾರೆ. ಪಾಠ ಮಾಡೋಕೆ ಬಿಲ್ಡಿಂಗ್ ಏನೋ ಇದೆ, ಆದ್ರೆ ಕಲಿಯೋಕೆ ಆಸ್ಪತ್ರೆ ಇಲ್ಲ! ಪಕ್ಕದಲ್ಲೇ ಇರಬೇಕಾದ ಆಸ್ಪತ್ರೆಗಾಗಿ ಈ ಹುಡುಗರು ಒಂದು ಗಂಟೆ ಕಾಲ ಬಸ್ ಹತ್ತಿ ಕಾಸರಗೋಡು ಟೌನ್‌ನ ಜನರಲ್ ಆಸ್ಪತ್ರೆಗೆ ಹೋಗಬೇಕು.
ಒಂದು ಬಿಲ್ಡಿಂಗ್ ಕಟ್ಟೋಕೆ ಹನ್ನೆರಡು ವರ್ಷ ಬೇಕಾದ್ರೆ, ಇನ್ನು ಕ್ವಾರ್ಟರ್ಸ್, ಹಾಸ್ಟೆಲ್, ಸ್ಪೆಷಾಲಿಟಿ ಬ್ಲಾಕ್ ಕಟ್ಟೋಕೆ ಎಷ್ಟು ಯುಗ ಬೇಕೋ ಆ ದೇವರಿಗೇ ಗೊತ್ತು. ಪಿನರಾಯಿ ವಿಜಯನ್ ಸರ್ಕಾರ ಮಾಡದಿದ್ದನ್ನ ಈ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರವಾದ್ರೂ ಮುಗಿಸುತ್ತಾ? ಅಥವಾ ಇದು ಮತ್ತೆ ಅರ್ಧಂಬರ್ಧ ನಾಟಕವಾಗಿ ಉಳಿಯುತ್ತಾ? ಕಾಯ್ದು ನೋಡೋಣ!