ಮಂಗಳೂರು: ಮುಲ್ಕಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ‘ಹೈಡ್ರೋವಿಡ್’ ಗಾಂಜಾ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿತೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ಸುಹಾನ (21) ಎಂದು ಗುರುತಿಸಲಾಗಿದೆ.
ಈಕೆ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿ.ಸಿ.ಎ (BCA) ವಿದ್ಯಾರ್ಥಿನಿಯಾಗಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯಿಂದ ಮಾರುಕಟ್ಟೆಯಲ್ಲಿ ಅಂದಾಜು 35,00,000/- ರೂ. ಮೌಲ್ಯದ 1 ಕೆ.ಜಿ. 42 ಗ್ರಾಂ ಹೈಡ್ರೋವಿಡ್ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೇ 12ರಂದು ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯ ಬಳಿ ಮಾದಕ ದ್ರವ್ಯವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಮೇರೆಗೆ ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣೆಯ ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಈ ವೇಳೆ ಶಂಕಿತ ವಿದ್ಯಾರ್ಥಿನಿಯನ್ನು ತಪಾಸಣೆ ನಡೆಸಿದಾಗ ಭಾರಿ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿದೆ.

ಪ್ರಾಥಮಿಕ ವಿಚಾರಣೆಯ ವೇಳೆ, ಆರೋಪಿತೆಯು ಈ ಮಾದಕ ವಸ್ತುವನ್ನು ತಮಿಳುನಾಡಿನ ಚೆನ್ನೈನಿಂದ ತರಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮಂಗಳೂರಿನಲ್ಲಿ ಅಕ್ರಮವಾಗಿ ಇದನ್ನು ಪೂರೈಕೆ ಮಾಡಿ ಹೆಚ್ಚಿನ ಹಣ ಸಂಪಾದಿಸುವ ಹಪಹಪಿಯಿಂದ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ.

ಬಂಧಿತ ಆರೋಪಿತೆ ಸುಹಾನಾ ವಿರುದ್ಧ ಈಗಾಗಲೇ ಗಂಭೀರ ಪ್ರಕರಣಗಳು ದಾಖಲಾಗಿವೆ. ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಒಂದು ಪ್ರಕರಣ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿತೆಯ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 32/2026 ಕಲಂ: 8(ಸಿ), 20(ಬಿ) ರಂತೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.