ನ್ಯಾಯವಾದಿ ಮೇಲೆ ರೌಡಿ ಶೀಟರ್‌ನಿಂದ ಹಲ್ಲೆ ಯತ್ನ- ಅನಾಹುತ ತಪ್ಪಿಸಿದ ಸಾರ್ವಜನಿಕರು

ಮಂಗಳೂರು: ಕಕ್ಷಿದಾರರಿಗೆ ಕಾನೂನು ಸಲಹೆ ನೀಡುತ್ತಿದ್ದ ನ್ಯಾಯವಾದಿಯನ್ನೇ ಗುರಿಯಾಗಿಸಿಕೊಂಡು ಕುಖ್ಯಾತ ರೌಡಿ ಶೀಟರ್ ರಿಯಾಜ್ ಎಂಬಾತ ಹಲ್ಲೆಗೆ ಯತ್ನಿಸಿರುವ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ನ್ಯಾಯವಾದಿ ಜೀಶನ್ ಅಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೇ 11ರಂದು ಸಂಜೆ ಸುಮಾರು 7 ಗಂಟೆಯ ವೇಳೆಗೆ ನ್ಯಾಯವಾದಿ ಜೀಶನ್ ಅಲಿ ಅವರು ತಮ್ಮ ಕಚೇರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಅತ್ತಾವರ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ರಿಯಾಜ್ ನ್ಯಾಯವಾದಿಗಳ ವಾಹನವನ್ನು ಅಡ್ಡಗಟ್ಟಿದ್ದಾನೆ. ಮೊದಲು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿ, ನಂತರ ತಾನು ತಂದಿದ್ದ ಆಯುಧಗಳಿಂದ ದಾಳಿ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸ್ಥಳೀಯರು ತಕ್ಷಣವೇ ರಿಯಾಜ್‌ನನ್ನು ತಡೆದು ನಿಲ್ಲಿಸಿದ್ದರಿಂದ ಅನಾಹುತವೊಂದು ತಪ್ಪಿದೆ.

ಮೂಲಗಳ ಪ್ರಕಾರ, ರಿಯಾಜ್ ಎಂಬಾತ ಕಳೆದ ಒಂಬತ್ತು ವರ್ಷಗಳಿಂದ ತನ್ನ ಪತ್ನಿಯ ಮೇಲೆ ನಿರಂತರ ದೌರ್ಜನ್ಯ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈ ಹಿಂಸೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಆತನ ಪತ್ನಿ ನ್ಯಾಯವಾದಿ ಜೀಶನ್ ಅಲಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ತನ್ನ ವಿರುದ್ಧ ದೂರು ನೀಡಲು ಸಲಹೆ ನೀಡುತ್ತಿದ್ದಾರೆ ಎಂಬ ವಿಚಾರಕ್ಕೆ ಕೆರಳಿದ ರಿಯಾಜ್, ಜೀಶನ್ ಅಲಿ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಈ ಸಂಚು ರೂಪಿಸಿದ್ದನು ಎನ್ನಲಾಗಿದೆ.

ದಾಳಿ ನಡೆಸಲು ಯತ್ನಿಸಿದ ರಿಯಾಜ್ ಒಬ್ಬ ಕುಖ್ಯಾತ ರೌಡಿ ಶೀಟರ್ ಆಗಿದ್ದಾನೆ. ಈ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿಯೂ ಈತ ಪ್ರಮುಖ ಆರೋಪಿಯಾಗಿದ್ದಾನೆ, ಬಂಟ್ವಾಳ ಮತ್ತು ಮಂಗಳೂರಿನ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಈಗಾಗಲೇ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪಿಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ರಿಯಾಜ್ ಬಂಧನಕ್ಕಾಗಿ ಬಲೆ ಬೀಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

error: Content is protected !!