
ಬೆಳಗಾವಿ: ತರಕಾರಿ ಮಾರುವ ವೇಷದಲ್ಲಿ ಬಂದು ಮನೆಗಳಲ್ಲಿ ಕಳ್ಳತನ ನಡೆಸಿ ಬಳಿಕ ಗೋವಾದಲ್ಲಿ ಮೋಜು ಮಸ್ತಿ ಮಾಡ್ತಿದ್ದ ಖತರ್ನಾಕ್ ಖದೀಮರ ಗ್ಯಾಂಗ್ ಅನ್ನು ಬೆಳಗಾವಿ ಪೊಲೀಸರು ಭೇದಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ದೇವೇಂದ್ರ ವಾಘಮೋರೆ, ಸಚಿನ್ ಗೌಳಿ, ಕಪಿಲ್ ಜಾಧವ್ ಬಂಧಿತರು.
ಕಳ್ಳತನಕ್ಕೂ ಮುಂಚೆ ಏರಿಯಾಗಳಲ್ಲಿ ತರಕಾರಿ ಮಾರುವವರ ವೇಷದಲ್ಲಿ ಓಡಾಟ ನಡೆಸುತ್ತಿದ್ದ ಆರೋಪಿಗಳು, ಈ ವೇಳೆ ಬೀಗ ಹಾಕಿದ ಮನೆಗಳನ್ನ ಗುರುತಿಸುತ್ತಿದ್ದರು. ಬಳಿಕ ರಾತ್ರಿ ಗ್ಯಾಂಗ್ ಕಟ್ಟಿಕೊಂಡು ಬಂದು ಮನೆ ಬೀಗ ಮುರಿದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು. ಈ ಕುರಿತು ಎಪಿಎಂಸಿ ಹಾಗೂ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಇದಕ್ಕಾಗಿ ಎರಡು ತಂಡ ರಚನೆ ಮಾಡಿ ಫೀಲ್ಡ್ಗೆ ಇಳಿದಿದ್ದರು. ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಮಹಾರಾಷ್ಟ್ರ ಮೂಲದ ದೇವೇಂದ್ರ ವಾಘಮೋರೆ, ಸಚಿನ್ ಗೌಳಿ, ಕಪಿಲ್ ಜಾಧವ್ ಅವರನ್ನು ಬಂಧಿಸಿ, ಅವರಿಂದ 4.71 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಾಗ್ರಿ, ಎರಡು ಬೈಕ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.

ಇನ್ನು ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಗ್ಯಾಂಗ್ನ ಕಿಂಗ್ಪಿನ್ ಅನ್ನೇ ಪೊಲೀಸರು ವಶಕ್ಕೆ ಪಡೆದಿದ್ದು, ಉತ್ತರ ಪ್ರದೇಶ ಮೂಲದ ಮಿಂಟು ವಿಶ್ವಾಸ್ ಬಂಧಿತ ಆರೋಪಿ. ಈತನಿಂದ 44 ಲಕ್ಷ 86 ಸಾವಿರ ರೂಪಾಯಿ ಮೌಲ್ಯದ 290ಗ್ರಾಂ ಚಿನ್ನ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಎರಡೂ ಗ್ಯಾಂಗ್ ಶಿವಮೊಗ್ಗ, ಕಲಬುರ್ಗಿ ಪೊಲೀಸರು ಸೇರಿದಂತೆ ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶದ ಪೊಲೀಸರಿಗೆ ಬೇಕಾಗಿದ್ದವರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಕಳ್ಳತನ ಮಾಡಿದ್ದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಗೋವಾಗೆ ತೆರಳಿ ಕೆಸಿನೋಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು ಎನ್ನಲಾಗಿದೆ.