ಲೌಕ್ಯ ರೈಗೆ ʻಎಕ್ಸ್ಟ್ರೀಮ್ ಟ್ಯಾಲೆಂಟ್’ ಗೌರವ: ಸಚಿತಾ ರಾವ್ ಪಾಲಿಗೆ ‘ಮಿಸ್ ಪ್ರೀ ಟೀನ್’ ಪಟ್ಟ

 

ಮಂಗಳೂರು: “ಕರಾವಳಿಯ ಪ್ರತಿಭೆಗಳಿಗೆ ವೇದಿಕೆ ಸಿಕ್ಕರೆ ಅವರು ಜಾಗತಿಕ ಮಟ್ಟದಲ್ಲಿ ಮಿಂಚಬಲ್ಲರು ಎಂಬುದಕ್ಕೆ ನಮ್ಮ ಸಂಸ್ಥೆಯ ವಿದ್ಯಾರ್ಥಿನಿಯರಾದ ಲೌಕ್ಯ ಮತ್ತು ಸಚಿತಾ ಅವರ ಸಾಧನೆಯೇ ಸಾಕ್ಷಿ ಎಂದು ವಾಯ್ರಾ ಪೇಜಂಟ್ರಿ ಅಂಡ್ ಮಾಡೆಲಿಂಗ್ ಸ್ಕೂಲ್‌ನ ತರಬೇತುದಾರ್ತಿ ಯಶಸ್ವಿನಿ ದೇವಾಡಿಗ ನುಡಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕೇರಳದ ಕ್ಯಾಲಿಕಟ್‌ನಲ್ಲಿ ನಡೆದ ʻಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್’ ಸೀಸನ್-10ರ ಸ್ಪರ್ಧೆಯ ಕುರಿತು ಮಾಹಿತಿ ನೀಡಿದ ಅವರು, “ಭಾರತದ ವಿವಿಧ ರಾಜ್ಯಗಳಿಂದ ಬಂದಿದ್ದ ನೂರಾರು ಸ್ಪರ್ಧಿಗಳ ನಡುವೆ ನಮ್ಮ ಮಂಗಳೂರಿನ ಲೌಕ್ಯ ಎಸ್ ರೈ ಮತ್ತು ಸಚಿತಾ ರಾವ್ ಅತ್ಯಂತ ಆತ್ಮವಿಶ್ವಾಸದಿಂದ ಸ್ಪರ್ಧಿಸಿದ್ದಾರೆ. 6 ವರ್ಷದ ಲೌಕ್ಯ ʻSR TOD JMI India’ ಮತ್ತು ‘Extreme Talent Award’ ಗೆದ್ದರೆ, 12 ವರ್ಷದ ಸಚಿತಾ ರಾವ್ ‘Miss Pre Teen JMI India’ ಪಟ್ಟ ಗೆಲ್ಲುವ ಮೂಲಕ ರಾಜ್ಯಕ್ಕೆ ಗೌರವ ತಂದಿದ್ದಾರೆ,” ಎಂದು ವಿವರಿಸಿದರು.

ಮುಂದುವರಿದು ಮಾತನಾಡಿದ ಯಶಸ್ವಿನಿ ಅವರು, “ರಾಷ್ಟ್ರಮಟ್ಟದಲ್ಲಿ ವಿಜೇತರಾದ ಈ ಇಬ್ಬರು ಪ್ರತಿಭೆಗಳು ಇದೀಗ ಆಗಸ್ಟ್‌ನಲ್ಲಿ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯಲಿರುವ
ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಪುಟಾಣಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ನಡಿಗೆ, ಸಂವಹನ ಕಲೆ ಮತ್ತು ವಸ್ತ್ರವಿನ್ಯಾಸದ ಕುರಿತು ಈಗಾಗಲೇ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಜಾಗತಿಕ ವೇದಿಕೆಯಲ್ಲೂ ಇವರು ಜಯಭೇರಿ ಬಾರಿಸುವ ಭರವಸೆ ನಮಗಿದೆ ಎಂದರು.

ಮಕ್ಕಳ ಸಾಧನೆಯ ಹಿಂದೆ ಪೋಷಕರ ಪ್ರೋತ್ಸಾಹ ದೊಡ್ಡದಿದೆ. ಲೌಕ್ಯ ಅವರ ಪೋಷಕರಾದ ಸಚಿನ್ ಮತ್ತು ಸುಷ್ಮಾ ರೈ ಹಾಗೂ ಸಚಿತಾ ಅವರ ಪೋಷಕರಾದ ಸಚಿನ್ ರಾವ್ ಮತ್ತು ಅಶ್ವಿನ್ ರಾವ್ ಅವರು ತಮ್ಮ ಮಕ್ಕಳ ಆಸಕ್ತಿಗೆ ಪೂರಕವಾಗಿ ನಿಂತಿರುವುದು ಶ್ಲಾಘನೀಯ. ಮಾಡೆಲಿಂಗ್ ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ, ಇದು ಮಕ್ಕಳಲ್ಲಿ ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ,” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಧಕ ಪುಟಾಣಿಗಳಾದ ಲೌಕ್ಯ ಎಸ್ ರೈ, ಸಚಿತಾ ರಾವ್, ಸುಷ್ಮಾ ರೈ, ಸಚಿನ್ ರಾವ್ ಇದ್ದರು.

error: Content is protected !!