ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ನೂತನ ಸರ್ಕಾರವು ಆಡಳಿತಕ್ಕೆ ಬಂದ ಬೆನ್ನಲ್ಲೇ ರಸ್ತೆಬದಿಯಲ್ಲಿ ನಮಾಜ್ ಮಾಡುವುದು ಹಾಗೂ ಸಾರ್ವಜನಿಕ ಬೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಇನ್ಮುಂದೆ ನಿಷೇಧಿಸಿದೆ ಎಂದು ರಾಜ್ಯ ಬಿಜೆಪಿ ಶಾಸಕ ಅರ್ಜುನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ರಸ್ತೆಗಳಲ್ಲಿ ಧಾರ್ಮಿಕ ಸಭೆಗಳು ಮತ್ತು ಪ್ರಾರ್ಥನೆಗಳನ್ನು ನಡೆಸುವಂತಿಲ್ಲ ಎಂದು ಆಡಳಿತವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ. ಜನರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಮುಕ್ತ ಅವಕಾಶವಿದ್ದು, ಸಾರ್ವಜನಿಕ ರಸ್ತೆಗಳನ್ನು ಪ್ರಾರ್ಥನೆಗಾಗಿ ಬಳಸುವುದನ್ನು ಸಹಿಸುವುದಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.


ಕಲ್ಲು ತೂರಾಟಗಾರರು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೊದಲ ಸಂಪುಟ ಸಭೆಯಲ್ಲೇ ಹಲವಾರು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಲಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಆಡಳಿತವು ಸಜ್ಜಾಗಿದೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರಾಜ್ಯದ ಗಡಿ ಬೇಲಿಯ ಸಂಪೂರ್ಣ ನಿಯಂತ್ರಣವನ್ನು ಬಿಎಸ್‌ಎಫ್‌ಗೆ (BSF) ವಹಿಸುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ, ಜಾನುವಾರು ಕಳ್ಳಸಾಗಣೆಯ ವಿರುದ್ಧ ಸರ್ಕಾರವು ಶೂನ್ಯ ಸಹಿಷ್ಣುತೆ ಹೊಂದಿದ್ದು, ಕಳ್ಳಸಾಗಣೆದಾರರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.