ಮಂಗಳೂರು: ಒಬ್ಬರ ಸಾವು ಇನ್ನೊಬ್ಬರ ಪಾಲಿಗೆ ಸಂಭ್ರಮದ ಸದ್ದಾಗಬಾರದು ಅಂತ ಧರ್ಮ ಹೇಳುತ್ತೆ. ಆದರೆ, ಅಧಿಕಾರದ ಅಮಲೇರಿದ ಈ ಹಜಾರಗಳಲ್ಲಿ ಧರ್ಮಕ್ಕೆ ಜಾಗವೆಲ್ಲಿದೆ? ಸಚಿವ ಡಿ. ಸುಧಾಕರ್ ಈಗ ನೆನಪು ಮಾತ್ರ. ಅವರ ಸಾವಿನ ಬೆನ್ನಲ್ಲೇ ಸಂಪುಟದ ಆ ಮೂರು ಖಾಲಿ ಕುರ್ಚಿಗಳ ಮೇಲೆ ಈಗ ಖಾದಿಧಾರಿಗಳ ಕಣ್ಣು ಬಿದ್ದಿದೆ. ಈಗಾಗಲೇ ನಾಗೇಂದ್ರ ಮತ್ತು ರಾಜಣ್ಣ ಹೊರಬಿದ್ದ ಮೇಲೆ ಎರಡು ಸೀಟುಗಳು ಅನಾಥವಾಗಿ ಬಿದ್ದಿದ್ದವು. ಈಗ ಆ ಸಂಖ್ಯೆ ಮೂರಕ್ಕೇರಿದೆ. ವಿಧಾನಸೌಧದ ಕಾರಿಡಾರ್‌ಗಳಲ್ಲಿ ಈಗ ಮಂತ್ರಿಗಿರಿಯ ಕನಸು ಹೊತ್ತವರ ಪಿಸುಮಾತುಗಳು ಜೋರಾಗಿ ಕೇಳಿಸುತ್ತಿವೆ.

ಅತ್ತ ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ತಲೆನೋವಿನ ಮೇಲೆ ತಲೆನೋವು. ಸರ್ಕಾರಕ್ಕೆ ಮೂರು ವರ್ಷ ತುಂಬಿದ ಸಂಭ್ರಮ ಒಂದೆಡೆಯಾದರೆ, ತಾನು ಕೂತಿರೋ ಕುರ್ಚಿಯ ಕೆಳಗೆ ಸಿಎಂ ಬದಲಾವಣೆಯ ಸುನಾಮಿ ಏಳುತ್ತಿರೋ ಆತಂಕ ಇನ್ನೊಂದೆಡೆ. ಆದರೂ ಸಿದ್ದರಾಮಯ್ಯ ಸದ್ದಿಲ್ಲದೆ ದೆಹಲಿಗೆ ಹೋಗಲು ಬ್ಯಾಗ್ ರೆಡಿ ಮಾಡಿಕೊಂಡಿದ್ದಾರೆ. ಅಲ್ಲಿ ಹೈಕಮಾಂಡ್‌ನ ದೊಡ್ಡಣ್ಣಗಳ ಮುಂದೆ “ಸ್ವಾಮಿ, ಈ ಮೂರು ಸೀಟುಗಳನ್ನು ತುಂಬಲು ಬಿಡಿ, ಇಲ್ಲವಾದರೆ ಆಕಾಂಕ್ಷಿಗಳು ನನ್ನನ್ನು ನಿದ್ದೆ ಮಾಡೋದಕ್ಕೆ ಬಿಡೋದಿಲ್ಲ” ಅಂತ ಬೇಡಿಕೆ ಇಡೋ ಪ್ಲಾನ್ ಅವರದ್ದು.

ಆದರೆ ದೆಹಲಿಯ ದೊರೆಗಳ ಲೆಕ್ಕಾಚಾರವೇ ಬೇರೆ ಇರುತ್ತೆ. ರಾಜ್ಯದಲ್ಲಿ ಸಿಎಂ ಕುರ್ಚಿಗೇ ಕುತ್ತು ಬಂದಿರೋವಾಗ, ಈ ಮೂರು ಸ್ಥಾನಗಳ ವಿಸ್ತರಣೆಗೆ ಅವರು ಗ್ರೀನ್ ಸಿಗ್ನಲ್ ಕೊಡ್ತಾರಾ? ಅಥವಾ “ಸದ್ಯಕ್ಕೆ ಸುಮ್ಮನಿರಿ ಸಿದ್ದಣ್ಣ” ಅಂತ ಬೆನ್ನು ತಟ್ಟಿ ಕಳಿಸ್ತಾರಾ? ಗೊತ್ತಿಲ್ಲ. ಮಂತ್ರಿ ಪದವಿಗಾಗಿ ಕಾದು ಕೂತಿರೋ ಆಕಾಂಕ್ಷಿಗಳ ಜೇಬಲ್ಲಿ ಈಗ ಹಾರ-ತುರಾಯಿಗಳು ಸಿದ್ಧವಾಗಿವೆ. ಆದರೆ ಆ ಹೂವುಗಳು ಬಾಡುವ ಮುನ್ನ ಸೌಧದ ಒಳಗೆ ಅವರಿಗೆ ಎಂಟ್ರಿ ಸಿಗುತ್ತಾ? ಕಾದು ನೋಡಬೇಕು.
