ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಎಚ್.ಎಂ. ಪೆರ್ನಾಲ್‌ಗೆ ಮೇ 15ರಂದು ಅಭಿನಂದನಾ ಸಮಾರಂಭ

ಮಂಗಳೂರು: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಖ್ಯಾತ ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ ಅಭಿನಂದನೆ ಸಲ್ಲಿಸಲು ಮೇ 15ರಂದು ಸಂಜೆ 5:45ಕ್ಕೆ ಮಂಗಳೂರಿನ ಟೌನ್ ಹಾಲ್‌ನಲ್ಲಿ ಅದ್ಧೂರಿ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಸಂಚಾಲಕ ಮೆಲ್ವಿನ್ ರೋಡ್ರಿಗಸ್ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಎಂ. ಪೆರ್ನಾಲ್ ಅವರ ಪ್ರಶಂಸಿತ ಸಾಹಿತ್ಯ ವಿಮರ್ಶೆ ಕೃತಿಯಾದ ʻಕೊಂಕಣಿ ಕಾವ್ಯೆಂ: ರೂಪಾಂ ಅನಿ ರೂಪಕಾಂ’ ಪುಸ್ತಕಕ್ಕೆ ಈ ಗೌರವ ಸಂದಿದೆ. ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಕೃತಿ ಎಂಬ ಇತಿಹಾಸವನ್ನು ಇದು ನಿರ್ಮಿಸಿದೆ. ಎಚ್.ಎಂ. ಪೆರ್ನಾಲ್ ಅವರು ಕರ್ನಾಟಕದ ನಾಲ್ಕನೇ ಕೊಂಕಣಿ ಸಾಹಿತಿಯಾಗಿ ಈ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ರೋಡ್ರಿಗಸ್ ಈ ಸಂದರ್ಭದಲ್ಲಿ ಸ್ಮರಿಸಿದರು.

ಮೇ 15ರ ಶುಕ್ರವಾರ ಸಂಜೆ 5:30ಕ್ಕೆ ಚಹಾ ಕೂಟದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಉಸ್ತಾದ್ ರಫೀಕ್ ಖಾನ್ ಅವರ ತಂಡದಿಂದ ಸಿತಾರ್ ಫ್ಯೂಷನ್ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ನಂತರ ಎಡ್ಡಿ ಸಿಕ್ವೇರಾ ಮತ್ತು ತಂಡದವರು ಪೆರ್ನಾಲ್ ಅವರ ಕವಿತೆಗಳ ಸಾದರೀಕರಣ ನಡೆಸಿಕೊಡಲಿದ್ದಾರೆ. ಸಂಜೆ 7:00 ಗಂಟೆಗೆ ಶಕುಂತಲಾ ಆರ್. ಕಿಣಿ ಮತ್ತು ವಿಲ್ಸನ್ ಕಟೀಲ್ ಅವರು ಪ್ರಶಸ್ತಿ ವಿಜೇತ ಸಾಹಿತಿಯೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ ಎಂದರು.

ಅನಿವಾಸಿ ಉದ್ಯಮಿ ಮತ್ತು ಕೊಂಕಣಿ ಭಾಷಾಭಿಮಾನಿ ಮೈಕಲ್ ಡಿಸೋಜಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕನ್ನಡ ಕವಿ ಮತ್ತು ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿ ಭಾಗವಹಿಸಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಇದೇ ವೇಳೆ ವಿವಿಧ ಕೊಂಕಣಿ ಸಂಸ್ಥೆಗಳ ವತಿಯಿಂದ ಪೆರ್ನಾಲ್ ಅವರಿಗೆ ಸನ್ಮಾನ ಕಾರ್ಯಕ್ರಮವೂ ಜರುಗಲಿದೆ ಎಂದರು.

ಪೆರ್ನಾಲ್ ಅವರು ಈವರೆಗೆ 4 ಕವನ ಸಂಕಲನಗಳು, 2 ಕಥಾ ಸಂಕಲನಗಳು ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. 850ಕ್ಕೂ ಹೆಚ್ಚು ಕವಿತೆಗಳು ಮತ್ತು 2,000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ‘ಕಿಟಾಳ್’ ಸಾಹಿತ್ಯಿಕ ಅಂತರ್ಜಾಲ ಪತ್ರಿಕೆಯ ಮೂಲಕ ಕೊಂಕಣಿ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ್ದಾರೆ ಎಂದು ಮೆಲ್ವಿನ್ ರೋಡ್ರಿಗಸ್ ಶ್ಲಾಘಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟಕ ಎಡ್ಡಿ ಸಿಕ್ವೇರಾ ಮತ್ತು ಟಾಯ್ಸ್ ನೊರೊನ್ಹಾ ಉಪಸ್ಥಿತರಿದ್ದರು.

error: Content is protected !!