ಶೂಟಿಂಗ್ ಲೋಕದ ದಿಗ್ಗಜರ ಸಮಾಗಮ: ಮಂಗಳೂರಿನಲ್ಲಿ ಮೇ 26ರಿಂದ ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್

ಮಂಗಳೂರು: ನಗರದ ರೈಫಲ್ ಕ್ಲಬ್ ವತಿಯಿಂದ ಎರಡನೇ ಆವೃತ್ತಿಯ ʻಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್-2026′ ಮೇ 26ರಿಂದ ಮೇ 30ರವರೆಗೆ ನಡೆಯಲಿದೆ ಎಂದು ಮಂಗಳೂರು ರೈಫಲ್ ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿ ಮುಕೇಶ್ ಕುಮಾರ್ ತಿಳಿಸಿದರು.

ಶೂಟಿಂಗ್ ಲೋಕದ ದಿಗ್ಗಜರ ಸಮಾಗಮ: ಮಂಗಳೂರಿನಲ್ಲಿ ಮೇ 26ರಿಂದ ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೆಯನ್ನು ತಳಮಟ್ಟದಿಂದ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರತಿಷ್ಠಿತ ಕೂಟವನ್ನು ಹಮ್ಮಿಕೊಳ್ಳಲಾಗಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ರಾಜ್ಯಗಳಿಂದ ಸುಮಾರು 450ಕ್ಕೂ ಹೆಚ್ಚು ಶೂಟರ್‌ಗಳು ಭಾಗವಹಿಸುವ ನಿರೀಕ್ಷೆಯಿದೆ. ಅರ್ಹತಾ ಸುತ್ತಿನ ಪಂದ್ಯಗಳು ಕದ್ರಿ ಮಲ್ಲಿಕಟ್ಟೆಯ ಜುಗುಲ್ ಟವರ್ಸ್‌ನಲ್ಲಿರುವ ಮಂಗಳೂರು ರೈಫಲ್ ಕ್ಲಬ್‌ನಲ್ಲಿ ನಡೆಯಲಿದ್ದು, ಅಂತಿಮ ಹಂತದ ಸ್ಪರ್ಧೆಗಳು ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿವೆ. 10 ಮೀಟರ್ ಏರ್ ರೈಫಲ್ ಮತ್ತು ಏರ್ ಪಿಸ್ತೂಲ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.

ಕೂಟದ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕದ ಅಂತರಾಷ್ಟ್ರೀಯ ಮಟ್ಟದ ಶೂಟರ್‌ಗಳು ಭಾಗವಹಿಸಲಿದ್ದಾರೆ. ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವ ಸಲುವಾಗಿ ಈ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ಅಲ್ಲದೆ, ದೇಶದ ರಕ್ಷಣೆ ಮಾಡುವ ಭಾರತೀಯ ಸೇನೆಯ ಕ್ರೀಡಾಪಟುಗಳಿಗೆ ವಿಶೇಷ ಆಹ್ವಾನ ನೀಡಲಾಗಿದ್ದು, ಅವರಿಗಾಗಿಯೇ ಪ್ರತ್ಯೇಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಗೌರವಿಸಲಾಗುವುದು ಎಂದು ಮುಕೇಶ್ ಕುಮಾರ್ ವಿವರಿಸಿದರು.

2017ರಲ್ಲಿ ಸ್ಥಾಪನೆಯಾದ ಮಂಗಳೂರು ರೈಫಲ್ ಕ್ಲಬ್ ಈಗಾಗಲೇ 32 ರಾಷ್ಟ್ರೀಯ ಮಟ್ಟದ ಶೂಟರ್‌ಗಳನ್ನು ದೇಶಕ್ಕೆ ನೀಡಿದೆ. ಮಂಗಳೂರಿನಲ್ಲಿ ಶೂಟಿಂಗ್ ಕ್ರೀಡಾ ಸಂಸ್ಕೃತಿಯನ್ನು ಗಟ್ಟಿಗೊಳಿಸುವುದು ಮತ್ತು ಸ್ಥಳೀಯ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡುವುದು ಈ ಚಾಂಪಿಯನ್‌ಶಿಪ್‌ನ ಮುಖ್ಯ ಗುರಿಯಾಗಿದೆ. ಕ್ರೀಡಾಕೂಟದ ಯಶಸ್ಸಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆಶಿಷ್ ಶೆಟ್ಟಿ, ಗೋಪಾಲಕೃಷ್ಣ ಹಾಗೂ ನಿತೇಶ್ ಕುಮಾರ್ ಉಪಸ್ಥಿತರಿದ್ದರು.

error: Content is protected !!