ಸುಪ್ರೀಂ ಮೆಟ್ಟಿಲೇರಿದ ಟಿವಿಕೆ ಬಿಕ್ಕಟ್ಟು; ಸರ್ಕಾರ ರಚಿಸಿಲು ಡಿಎಂಕೆ-ಎಐಎಡಿಎಂಕೆ ಗುಪ್ತ ಸಮಾಲೋಚನೆ

ಚೆನ್ನೈ: ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅತ್ತ ಶಾಸಕರ ಸೆಳೆತ ಮತ್ತು ಕುದುರೆ ವ್ಯಾಪಾರದ ಭೀತಿಯಿಂದಾಗಿ ರಾಜಕೀಯ ಪಕ್ಷಗಳು ತಮ್ಮ ಶಾಸಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮುಂದಾಗಿವೆ. ಈ ನಡುವೆ ಡಿಎಂಕೆ ಹಾಗೂ ಎಐಎಡಿಎಂಕೆ ಜೊತೆ ಸೇರಿ ಸರ್ಕಾರ ರಚಿಸಲು ತೆರೆಮರೆಯ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಹಸ್ಯ ಸ್ಥಳವೊಂದರಲ್ಲಿ ಉಭಯ ಪಕ್ಷಗಳ ನಾಯಕರು ಗುಪ್ತ ಸಮಾಲೋಚನೆ ನಡೆಸುಯತ್ತಿದ್ದು, ಜೋಸೆಫ್‌ ವಿಜಯನ್‌ ಯಾವ ಕಾರಣಕ್ಕೂ ಸಿಎಂ ಆಗದಂತೆ ತಡೆಯಲು ಹೆಣಗಾಡುತ್ತಿದೆ.

ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ರಾಜ್ಯಪಾಲರು ಆಮಂತ್ರಣ ನೀಡದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದರೆ, ಇತ್ತ ಅಧಿಕಾರ ಹಿಡಿಯುವ ಕಸರತ್ತು ತೀವ್ರಗೊಳ್ಳುತ್ತಿದ್ದಂತೆಯೇ ಶಾಸಕರು ಎದುರಾಳಿ ಪಾಳಯದತ್ತ ಹೋಗದಂತೆ ತಡೆಯಲು ರೆಸಾರ್ಟ್ ರಾಜಕೀಯ ಮತ್ತು ರಾಜ್ಯದಿಂದ ಹೊರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗಳು ಬಿರುಸುಗೊಂಡಿವೆ.

ನಿವೃತ್ತ ಐಪಿಎಸ್ ಅಧಿಕಾರಿ ಎಂ. ರಾಮಸುಬ್ರಮಣಿ ಅವರು ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸಂವಿಧಾನಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿಧಾನಸಭೆಯ ಹೊರಗೆ ಬಹುಮತದ ತೀರ್ಮಾನ ಮಾಡುವುದು ಸರಿಯಲ್ಲ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿ.ವಿ.ಕೆ 108 ಸ್ಥಾನಗಳನ್ನು ಗೆದ್ದು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ನ 5 ಶಾಸಕರ ಬೆಂಬಲದೊಂದಿಗೆ ಟಿ.ವಿ.ಕೆ ಬಲ 113ಕ್ಕೆ ಏರಿದ್ದರೂ, ಬಹುಮತಕ್ಕೆ (118) ಇನ್ನು ಐದು ಸ್ಥಾನಗಳ ಕೊರತೆಯಿದೆ. ಈ ಕಾರಣ ನೀಡಿ ಸರ್ಕಾರ ರಚನೆಗೆ ಆಮಂತ್ರಣ ನಿರಾಕರಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಸದನದ ಒಳಗಡೆ ‘ಫ್ಲೋರ್ ಟೆಸ್ಟ್’ ಮೂಲಕ ಬಹುಮತ ಸಾಬೀತುಪಡಿಸಲು ವಿಜಯ್ ಅವರಿಗೆ ರಾಜ್ಯಪಾಲರು ಅವಕಾಶ ನೀಡಬೇಕು ಎಂಬುದು ಅರ್ಜಿದಾರರ ಪ್ರಮುಖ ಬೇಡಿಕೆಯಾಗಿದೆ.

ಈಗಾಗಲೇ ಟಿ.ವಿ.ಕೆ ಸದಸ್ಯೆ ಎಳಿಲರಸಿ ಕೆ. ಎಂಬುವವರು ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯಪಾಲರ ವಿಳಂಬ ಧೋರಣೆಯು ಸಂವಿಧಾನದ 12 ಮತ್ತು 32ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ. ಟಿ.ವಿ.ಕೆ ಮುಖ್ಯಸ್ಥ ವಿಜಯ್ ಅವರು ಎರಡು ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸಿ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ.

error: Content is protected !!