ಶಾಸಕಾಂಗ ಪಕ್ಷದ ಸಭೆ: ಅಮಿತ್ ಶಾ ಆಗಮನ, ಬಿಜೆಪಿಯ ಐತಿಹಾಸಿಕ ಸರ್ಕಾರ ರಚನೆಗೆ ಚಾಲನೆ

ಕೋಲ್ಕತ್ತಾ: ರಾಜ್ಯದಲ್ಲಿ ಚೊಚ್ಚಲ ಬಿಜೆಪಿ ಸರ್ಕಾರ ರಚನೆಯ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು(ಮೇ.8) ಬೆಳಿಗ್ಗೆ ಕೋಲ್ಕತ್ತಾಗೆ ಆಗಮಿಸಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಪ್ರಮುಖ ನಾಯಕರು ಅದ್ಧೂರಿಯಾಗಿ ಸ್ವಾಗತಿಸಿದರು. ಇಲ್ಲಿಂದ ಅವರು ನ್ಯೂ ಟೌನ್‌ನಲ್ಲಿರುವ ಹೋಟೆಲ್‌ಗೆ ತೆರಳಿದ್ದು, ಮಧ್ಯಾಹ್ನ ಬಿಶ್ವ ಬಾಂಗ್ಲಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಯಾರೆಂಬುದು ಅಧಿಕೃತವಾಗಿ ಘೋಷಣೆಯಾಗಲಿದೆ.

ಶನಿವಾರ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ(TMC) 15 ವರ್ಷಗಳ ಸುದೀರ್ಘ ಆಡಳಿತಕ್ಕೆ ಅಂತ್ಯ ಹಾಡಿರುವ ಬಿಜೆಪಿ, ಭರ್ಜರಿ ಬಹುಮತದೊಂದಿಗೆ ವಿಜಯಮಾಲೆ ತೊಟ್ಟಿದೆ. ಇದು ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನದ ಅತಿದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೊಸ ಸರ್ಕಾರ ರಚನೆಗೆ ಹಾದಿ ಸುಗಮಗೊಳಿಸಲು ರಾಜ್ಯಪಾಲ ಆರ್.ಎನ್. ರವಿ ಅವರು ಗುರುವಾರವೇ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ನಾಳಿನ ಸಮಾರಂಭದ ಮೂಲಕ ಬಂಗಾಳದಲ್ಲಿ “ಸೋನಾರ್ ಬಾಂಗ್ಲಾ” ನಿರ್ಮಾಣದ ಗುರಿಯೊಂದಿಗೆ ಬಿಜೆಪಿ ಆಡಳಿತ ಆರಂಭಿಸಲಿದೆ.

error: Content is protected !!