ಸುಭಾಷಿತನಗರ: ಸಿಟಿಲೇಔಟ್ ನಲ್ಲಿ ಅವೈಜ್ಞಾನಿಕ ತಡೆಗೋಡೆ ನಿರ್ಮಾಣ; ನಾಗರಿಕರ ಆಕ್ರೋಶ

ಸುರತ್ಕಲ್: ಸುಭಾಷಿತನಗರಕ್ಕೆ ಹೊಂದಿಕೊಂಡಿರುವ ಸಿಟಿಲೇಔಟ್ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿರುವುದು ನಾಗರಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಮುಂಗಾರು ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಈ ರೀತಿಯ ನಿರ್ಮಾಣ ಮಳೆಗಾಲದಲ್ಲಿ ನೆರೆಯ ಅನಾಹುತಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸುಭಾಷಿತನಗರ ಮತ್ತು ಸಿಟಿಲೇಔಟ್ ನಾಗರಿಕರು ಈಗಾಗಲೇ ಮನಪಾ ಅಧಿಕಾರಿಗಳಿಗೆ ಮಾಹಿತಿ ನೀಡಿ, ಈ ಕಾಮಗಾರಿಯನ್ನು ತಡೆಹಿಡಿಯುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಅಧಿಕಾರಿಗಳ ಯಾವುದೇ ಸ್ಪಂದನೆ ಕಂಡುಬಂದಿಲ್ಲ. ನಾಗರಿಕರ ಪ್ರಕಾರ, ಕೇವಲ ಒಂದು ಕಡೆ ತಡೆಗೋಡೆ ನಿರ್ಮಿಸಿದರೆ ಪಶ್ಚಿಮ ಭಾಗದಲ್ಲಿರುವ ಮನೆಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಎರಡೂ ಕಡೆ ತಡೆಗೋಡೆ ನಿರ್ಮಿಸಬೇಕು ಅಥವಾ ಅವೈಜ್ಞಾನಿಕ ನಿರ್ಮಾಣವನ್ನು ತಕ್ಷಣ ನಿಲ್ಲಿಸಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

“ಮನಪಾ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರು” ಎಂದು ಸ್ಥಳೀಯ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.

ಸಿಟಿಲೇಔಟ್ ಮತ್ತು ಸುಭಾಷಿತನಗರದ ನಿವಾಸಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಮನಪಾ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ, ತಾವೇ ಅವೈಜ್ಞಾನಿಕ ತಡೆಗೋಡೆಯನ್ನು ನಿಲ್ಲಿಸುವುದಾಗಿ ತಿಳಿಸಿದ್ದಾರೆ.

error: Content is protected !!