ಸುರತ್ಕಲ್‌ನ ʻಚರ್ಮುರಿ ಚಕ್ರವರ್ತಿ’ ಪ್ರಕಾಶ್ ಕಾಮತ್: ರಾತ್ರಿ 10ರವರೆಗೂ ಇಲ್ಲಿ ರುಚಿ ಸವಿಯಲು ಕ್ಯೂ!

ಸುರತ್ಕಲ್: ರಾತ್ರಿಯ ನಿಶ್ಯಬ್ದದಲ್ಲಿ ಸುರತ್ಕಲ್‌ನ ರಸ್ತೆಬದಿಯ ಆ ಪುಟ್ಟ ಸ್ಟಾಲ್ ಮುಂದೆ ಜನಜಂಗುಳಿ ಕಂಡರೆ ಆಶ್ಚರ್ಯಪಡಬೇಡಿ. ಅಲ್ಲಿ ನಡೆಯುತ್ತಿರುವುದು ಬರೀ ವ್ಯಾಪಾರವಲ್ಲ, ಅದೊಂದು ಮೂರು ದಶಕಗಳ ನಂಟಿನ ರುಚಿಯ ಸಮ್ಮಿಲನ! ಅಲ್ಲಿರುವುದು ಪ್ರಕಾಶ್ ಕಾಮತ್ ಅವರ ಪ್ರಸಿದ್ಧ ಚರ್ಮುರಿ ಸ್ಟಾಲ್. ಕಳೆದ 30 ವರ್ಷಗಳಿಂದಲೂ ಹೆಚ್ಚು ಕಾಲ ಸುರತ್ಕಲ್‌ನ ಜನರ ನಾಲಿಗೆಯ ಮೇಲೆ ರುಚಿಯ ನರ್ತನ ಮಾಡಿಸುತ್ತಿರುವ ಕಾಮತ್ ಅವರು ಇಂದಿಗೂ ಇಲ್ಲಿನ ಅಲಿಖಿತ ‘ಚರ್ಮುರಿ ಕಿಂಗ್’.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಕೋಲ್ಕತ್ತದ ಬೀದಿಗಳಲ್ಲಿ ನಿಂತು ಅಲ್ಲಿನ ಚರ್ಮುರಿ (ಝಲ್ ಮುರಿ) ಸವಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದವು. ಬಡವ-ಬಲ್ಲಿದ ಎನ್ನದೆ ಎಲ್ಲರ ನಾಲಿಗೆಗೂ ನೀರೂರಿಸುವ ಶಕ್ತಿ ಇರುವುದು ಈ ಚರ್ಮುರಿಗೆ ಮಾತ್ರ! ಇಂತಹದೇ ರುಚಿಯ ಮಾಂತ್ರಿಕ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಸುರತ್ಕಲ್‌ನ ʻಚರ್ಮುರಿ ಚಕ್ರವರ್ತಿ’ ಪ್ರಕಾಶ್ ಕಾಮತ್ ಅವರ ರುಚಿಯ ದರ್ಬಾರ್ ಹೇಗಿದೆ ಎಂಬುದು ಇಲ್ಲಿದೆ ನೋಡಿ…

ಕರಾವಳಿಯ ಮಣ್ಣಿನ ಸೊಗಡಾದ ಯಕ್ಷಗಾನ, ದೈವದ ನೇಮ-ಕೋಲ ಅಥವಾ ನಾಟಕಗಳ ಪ್ರದರ್ಶನ ಎಲ್ಲೇ ಇರಲಿ, ಅಲ್ಲಿ ಪ್ರಕಾಶ್ ಕಾಮತ್ ಅವರ ಚರ್ಮುರಿ ಸ್ಟಾಲ್ ಹಾಜರಿರಲೇಬೇಕು. ಮೇಳದ ಸದ್ದಿನ ನಡುವೆ ಕಾಮತ್ ಅವರು ಕೈಚಳಕದಲ್ಲಿ ತಯಾರಿಸುವ ಚರ್ಮುರಿಯ ಘಮಲು ಸುತ್ತಮುತ್ತಲಿನವರನ್ನು ತನ್ನತ್ತ ಸೆಳೆಯುತ್ತದೆ. ಇವರ ಚರ್ಮುರಿ ಸವಿಯಲು ಜನರು ತಾಳ್ಮೆಯಿಂದ ಸಾಲುಗಟ್ಟಿ ನಿಲ್ಲುವುದನ್ನು ನೋಡಿದರೆ, ಆ ಚರ್ಮುರಿಯಲ್ಲಿ ಏನೋ ಒಂದು ಮಾಂತ್ರಿಕ ಶಕ್ತಿ ಇದೆ ಎಂಬುದು ಖಚಿತವಾಗುತ್ತದೆ.

ಕಾಮತ್ ಅವರ ಈ ಚರ್ಮುರಿಯ ಖ್ಯಾತಿ ಕೇವಲ ಸುರತ್ಕಲ್‌ಗೆ ಮಾತ್ರ ಸೀಮಿತವಾಗಿಲ್ಲ. ಸಮೀಪದ ಮುಕ್ಕ, ಹಳೆಯಂಗಡಿ, ಬೈಕಂಪಾಡಿ, ಕೃಷ್ಣಾಪುರ ಹಾಗೂ ಕಾಟಿಪಳ್ಳದಂತಹ ಪ್ರದೇಶಗಳಿಂದಲೂ ಜನರು ಇವರ ಕೈರುಚಿಯನ್ನು ಅರಸಿಕೊಂಡು ಬರುತ್ತಾರೆ. ಮಳೆ ಇರಲಿ, ಚಳಿ ಇರಲಿ, ರಾತ್ರಿ 10 ಗಂಟೆಯವರೆಗೆ ಸುರತ್ಕಲ್‌ನಲ್ಲಿ ಇವರ ಸ್ಟಾಲ್ ತೆರೆದಿರುತ್ತದೆ. ಆಫೀಸ್ ಮುಗಿಸಿ ಮನೆಗೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು ಮತ್ತು ದಾರಿಹೋಕರೆಲ್ಲರಿಗೂ ಕಾಮತ್ ಅವರ ಸ್ಟಾಲ್ ಒಂದು ನೆಚ್ಚಿನ ಅಡ್ಡಾ.

ಸುರತ್ಕಲ್‌ನಂತಹ ಬೆಳೆಯುತ್ತಿರುವ ನಗರದಲ್ಲಿ ಎಷ್ಟೇ ದೊಡ್ಡ ಹೋಟೆಲ್‌ಗಳು ಬಂದರೂ, ಪ್ರಕಾಶ್ ಕಾಮತ್ ಅವರ ಚರ್ಮುರಿಗೆ ಇರುವ ಮೌಲ್ಯವೇ ಬೇರೆ. ಕತ್ತರಿಸಿದ ಈರುಳ್ಳಿ, ಕ್ಯಾರೆಟ್, ಕೊಬ್ಬರಿ ಎಣ್ಣೆ ಮತ್ತು ಹದವಾಗಿ ಬೆರೆಸಿದ ಮಸಾಲೆಯೊಂದಿಗೆ ಅವರು ಕೊಡುವ ಚರ್ಮುರಿಯಲ್ಲಿ ಮೂರು ದಶಕಗಳ ಅನುಭವ ಅಡಗಿದೆ. ಅವರ ಪ್ರೀತಿಯ ಮಾತು ಮತ್ತು ಅಚ್ಚುಕಟ್ಟಾದ ಕೆಲಸವೇ ಇಂದಿಗೂ ಅವರ ಗ್ರಾಹಕರನ್ನು ಗಟ್ಟಿಯಾಗಿ ಹಿಡಿದಿಟ್ಟಿದೆ.

ನೀವು ಒಂದು ವೇಳೆ ಸುರತ್ಕಲ್ ಕಡೆ ಪ್ರಯಾಣಿಸುತ್ತಿದ್ದರೆ, ರಾತ್ರಿ ಹತ್ತು ಗಂಟೆಯ ಒಳಗೆ ಪ್ರಕಾಶ್ ಕಾಮತ್ ಅವರ ಸ್ಟಾಲ್‌ಗೆ ಭೇಟಿ ನೀಡಿ ಒಂದು ಪ್ಲೇಟ್ ಚರ್ಮುರಿ ತಿನ್ನಲು ಮರೆಯಬೇಡಿ. ಆ ರುಚಿ ನಿಮ್ಮ ನೆನಪಿನಲ್ಲಿ ಸದಾ ಕಾಲ ಉಳಿಯುವುದು ಗ್ಯಾರಂಟಿ!

error: Content is protected !!